ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಜನವರಿ 2026ರಲ್ಲಿ ನಡೆಯಲಿರುವ ಪರ್ಯಾಯ ಮಹೋತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇರುವ ಹಿನ್ನೆಲೆ, ಎಲ್ಲಾ ಮೂಲಭೂತ ಸೌಕರ್ಯಗಳು, ಕಾನೂನು-ಸುವ್ಯವಸ್ಥೆ ಹಾಗೂ ಆರೋಗ್ಯ ಸಂಬಂಧಿತ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅವರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ರಜತಾದ್ರಿ ಸಭಾಂಗಣದಲ್ಲಿ ನಡೆದ ಪರ್ಯಾಯ ಮಹೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರ್ಯಾಯ ಮಹೋತ್ಸವದ ವೇಳೆ ಉಡುಪಿ ನಗರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದಲೂ ಭಕ್ತರು ಆಗಮಿಸಲಿದ್ದಾರೆ. ಇವರಿಗೆ ಶೌಚಾಲಯ, ಕುಡಿಯುವ ನೀರು, ಪಾರ್ಕಿಂಗ್, ದಾರಿದೀಪ, ರಸ್ತೆ ದುರಸ್ತಿ ಹಾಗೂ ಸಂಚಾರ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ನಗರದ ಶುಚಿತ್ವ ಕಾಪಾಡಲು ಪೌರಾಯುಕ್ತರಿಗೆ ಹೆಚ್ಚು ಪೌರ ಕಾರ್ಮಿಕರನ್ನು ನಿಯೋಜಿಸುವಂತೆ ಸೂಚಿಸಿ, ಮಠದ ಆವರಣದಲ್ಲಿ ಜನರ ದಟ್ಟಣೆ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸುವುದರ ಜೊತೆಗೆ ಕಂಟ್ರೋಲ್ ರೂಮ್‌ಗಳು 24 ಗಂಟೆ ಕಾರ್ಯನಿರ್ವಹಿಸಬೇಕೆಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರಾದ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಜನ ಸಂದಣಿ ಹೆಚ್ಚಾಗಲಿರುವುದರಿಂದ ಯಾವುದೇ ಅವಘಡ ಸಂಭವಿಸದಂತೆ ಪೂರ್ವಸಿದ್ಧತೆ ಅಗತ್ಯ. ಅಧಿಕಾರಿಗಳು ಪರ್ಯಾಯ ಮಹೋತ್ಸವವನ್ನು ಊರ ಹಬ್ಬದ ಸಂಭ್ರಮದಂತೆ ಯಶಸ್ವಿಯಾಗಿ ನಡೆಸಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಆಯುಕ್ತೆ ರಶ್ಮಿ, ಮಠದ ದಿವಾನ್ ಡಾ. ಉದಯ್ ಕುಮಾರ್ ಸರಳತ್ತಾಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸ್ವಾಗತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.



