ಉಡುಪಿ : ಭಾವೀ ಪರ್ಯಾಯ ಪೀಠಾಧೀಶರಾಗಿರುವ ಹಾಗೂ ಪ್ರಥಮ ಬಾರಿಗೆ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಶೀರೂರು ಶ್ರೀಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಪ್ರಸ್ತುತ ಪರ್ಯಾಯ ಪೂರ್ವಭಾವೀ ಸಂಚಾರದ ಅಂಗವಾಗಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೇವೊತ್ತಮ ಮಠ, ಪರ್ತಗಾಳಿ (ಗೋವಾ) ಇಲ್ಲಿಗೆ ಭಕ್ತಿಪೂರ್ವಕವಾಗಿ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪರ್ತಗಾಳಿ ಮಠದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದರನ್ನು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಭೇಟಿಯಾಗಿ, ಪರಸ್ಪರ ಆತ್ಮೀಯ ಗೌರವ ವಿನಿಮಯ ನಡೆಸಿದರು. ಬಳಿಕ ತಮ್ಮ ಪಟ್ಟದ ದೇವರ ದರ್ಶನವನ್ನು ನೆರವೇರಿಸಿದರು.


ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಉಭಯ ಶ್ರೀಪಾದರು ಪರಸ್ಪರ ಗೌರವ ಸಮರ್ಪಣೆ ಸಲ್ಲಿಸಿ, ಧಾರ್ಮಿಕ ಹಾಗೂ ಸಂಪ್ರದಾಯಿಕ ವಿಷಯಗಳ ಕುರಿತು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಪರ್ತಗಾಳಿ ಮಠದ ವತಿಯಿಂದ ಶೀರೂರು ಶ್ರೀಪಾದರಿಗೆ ಮಾಲಿಕೆ, ಮಂಗಳಾರತಿ ಸಲ್ಲಿಸಲಾಯಿತು. ನಂತರ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ರಾತ್ರಿ ಪೂಜೆಯನ್ನು ನೆರವೇರಿಸಿದರು.



