ಉಡುಪಿ: ಶೀರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿಯಿಂದ ಹೊರೆಕಾಣಿಕೆ ನೀಡುವ ಕುರಿತು ನಡೆದ ಪತ್ರಿಕಾಗೋಷ್ಠಿಗೆ ಪರ್ಯಾಯ ಸ್ವಾಗತ ಸಮಿತಿಯ ಯಾವುದೇ ಅನುಮತಿ ಇಲ್ಲ ಎಂದು ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸ್ಪಷ್ಟಪಡಿಸಿದ್ದಾರೆ.

ಪರ್ಯಾಯ ಮಹೋತ್ಸವದ ಹೊರೆಕಾಣಿಕೆ ಸಂಬಂಧ ಮುಸ್ಲಿಂ ಸೌಹಾರ್ದ ಸಮಿತಿಯವರು ಈವರೆಗೆ ಹೊರೆಕಾಣಿಕೆ ಸಮಿತಿಗೆ ಯಾವುದೇ ಮಾಹಿತಿ ನೀಡಿಲ್ಲ. ಮಠದ ವತಿಯಿಂದಲೂ ಹೊರೆಕಾಣಿಕೆ ನೀಡುವಂತೆ ಯಾವುದೇ ಮನವಿ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಅತ್ಯಂತ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಶ್ರೀ ಕೃಷ್ಣ ದೇವರಿಗೆ ಸಮರ್ಪಿಸುವ ಹೊರೆಕಾಣಿಕೆ ಕುರಿತು ಪರ್ಯಾಯ ಸ್ವಾಗತ ಸಮಿತಿಯ ನಿರ್ಧಾರವೇ ಅಂತಿಮ. ಮುಸ್ಲಿಂ ಸೌಹಾರ್ದ ಸಮಿತಿಯ ಪತ್ರಿಕಾಗೋಷ್ಠಿಗೂ ಪರ್ಯಾಯ ಸ್ವಾಗತ ಸಮಿತಿಗೂ ಯಾವುದೇ ಸಂಬಂಧವಿಲ್ಲ ಎಂದು ಯಶ್ ಪಾಲ್ ಸುವರ್ಣ ಹೇಳಿದ್ದಾರೆ. ಪರ್ಯಾಯ ಸ್ವಾಗತ ಸಮಿತಿಯ ಅನುಮತಿ ಪಡೆಯದೆ ಏಕಪಕ್ಷೀಯವಾಗಿ ಹೊರೆಕಾಣಿಕೆ, ನೀರಿನ ಬಾಟಲ್ ವಿತರಣೆ ಹಾಗೂ ದಫ್ ಕಾರ್ಯಕ್ರಮದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.



