ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡದ/ಖಾಲಿ ನಿವೇಶನ ಮಾಲೀಕರು ಹಾಗೂ ಅಧಿಭೋಗದಾರರು ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆಯಂತೆ, ಉಡುಪಿ ನಗರಸಭಾ ವ್ಯಾಪ್ತಿಯ ಮಾರುಕಟ್ಟೆ ಬೆಲೆ ಪರಿಷ್ಕರಣೆಯಾಗದೇ ಇರುವುದರಿಂದ, 2024-25 ರಲ್ಲಿ ನಿರ್ಧರಣೆಯಾದ ತೆರಿಗೆಯ ಮೇಲೆ ಶೇ. 3 ರಷ್ಟು ತೆರಿಗೆಯನ್ನು ಉಡುಪಿ ನಗರಸಭೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಹೆಚ್ಚಿಸಲಾಗಿರುತ್ತದೆ.
ಆದ್ದರಿಂದ ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡದ/ಖಾಲಿ ನಿವೇಶನ ಮಾಲೀಕರು ಹಾಗೂ ಅಧಿಭೋಗದಾರರು 2025-26ನೇ ಸಾಲಿನ ಆಸ್ತಿತೆರಿಗೆಯನ್ನು, 2024-25 ರ ಆಸ್ತಿತೆರಿಗೆಯ ಮೇಲೆ ಶೇ. 3 ರಷ್ಟು ಹೆಚ್ಚಿಸಿ, ಏಪ್ರಿಲ್ 1 ರಿಂದ 30 ರ ಒಳಗೆ ಪಾವತಿಸಿದ್ದಲ್ಲಿ ಶೇ.5 ರ ರಿಯಾಯಿತಿ ಪಡೆಯಬಹುದಾಗಿದೆ. ಮೇ 1 ರಿಂದ ಜೂನ್ 30 ರ ವರೆಗೆ ದಂಡ ರಹಿತ ಪಾವತಿಗೆ ಅವಕಾಶವಿದ್ದು, ಜುಲೈ 1 ರ ನಂತರ ಪಾವತಿಸಿದ್ದಲ್ಲಿ ಆಸ್ತಿ ತೆರಿಗೆಯ ಮೇಲೆ ಪ್ರತಿ ತಿಂಗಳು ಶೇ. 2 ರಷ್ಟು ದಂಡ ವಿಧಿಸಲಾಗುವುದು. 2024-25 ನೇ ಸಾಲಿನ ಹಾಗೂ ಹಿಂದಿನ ಅವಧಿಯ ಆಸ್ತಿ ತೆರಿಗೆ ಪಾವತಿಸದೇ ಇರುವವರು ಶೇ. 2 ರಷ್ಟು ದಂಡದೊಂದಿಗೆ ಪಾವತಿಸಿ, ನಗರಸಭೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.