ಉಡುಪಿ: ಪರಶುರಾಮ ಥೀಮ್ ಪಾರ್ಕ್ ಮೇಲ್ಚಾವಣಿ ತಾಮ್ರದ ಹೊದಿಕೆ ಕಳವು ಪ್ರಕರಣದ ಕುರಿತು ಕಾರ್ಕಳ ಶಾಸಕ ಸುನಿಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟೀಟ್ ಮೂಲಕ ಪ್ರತಿಕ್ರಿಯಿಸಿದ ಅವರು, ಪರಶುರಾಮ ಥೀಮ್ ಪಾರ್ಕ್ ಹಾಳು ಬೀಳುವಂತೆ ಮಾಡಿರುವುದು ಕಾಂಗ್ರೆಸ್ ಎಂದು ಆರೋಪಿಸಿದ್ದಾರೆ.

ಕಳೆದ ವಾರ ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಸುನಿಲ್ ಕುಮಾರ್, ಭಾರತದ ಶ್ರದ್ಧಾ ಕೇಂದ್ರಗಳನ್ನು ಘಜ್ನಿ–ಘೋರಿ–ಖಿಲ್ಜಿ–ಮೊಘಲರು ಒಡೆದಿದ್ದರೆ, ಈಗ ಥೀಮ್ ಪಾರ್ಕ್ ಮೇಲ್ಚಾವಣಿ ಕದ್ದವರು ಅವರ ವಂಶಸ್ಥರು ಎಂದು ಕಟುವಾಗಿ ಟೀಕಿಸಿದ್ದಾರೆ.

ಕರಾವಳಿಯಲ್ಲಿ ಪರಶುರಾಮನ ಹೆಜ್ಜೆಗುರುತು ಇರಬಾರದೆಂದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದವರು ಈಗ ತಮ್ಮ ಮತಬ್ಯಾಂಕ್‌ನ ಪುಂಡರಿಂದ ಕಳ್ಳತನ ಮಾಡಿಸಿದ್ದಾರೆ. ಈ ಧೈರ್ಯ ಎಲ್ಲಿಂದ ಬಂತು? ಕಾಂಗ್ರೆಸ್‌ನ ಹಿಂದೂ ವಿರೋಧಿ ಭಾವನೆಯಿಂದಲ್ಲವೇ? ಎಂದು ಪ್ರಶ್ನಿಸಿದ ಅವರು, ಇದು ಭಾವನೆಗಳಿಗೆ ಘಾಸಿ ಮಾಡಿದ್ದು ಮಾತ್ರವಲ್ಲ, ಪ್ರವಾಸೋದ್ಯಮಕ್ಕೂ ಅಡ್ಡಿಯಾಗಿದೆ. ಇದರ ಪರಿಣಾಮ ಮುಂದಿನ ಚುನಾವಣೆಯವರೆಗೆ ಅಲ್ಲ, ಶತಮಾನಗಳವರೆಗೂ ಉಳಿಯಲಿದೆ. ಇಲ್ಲಿಂದಲೇ ಕಾಂಗ್ರೆಸ್ ಪತನದ ಕ್ಷಣಗಣನೆ ಆರಂಭವಾಗಿದೆ ಎಂದು ಹೇಳಿದ್ದಾರೆ. ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.



