ಉಡುಪಿ: ಕಾರ್ಕಳ ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾಗಿರುವ ಪರಶುರಾಮ ಥೀಂ ಪಾರ್ಕ್ ಪಾರ್ಕ್ ನಲ್ಲಿ ನಿರ್ಮಿಸಲಾಗಿರುವ ಪರಶುರಾಮನ ಮೂರ್ತಿಯ ವಿಚಾರವಾಗಿ ಮಹತ್ವದ ಅಂಶವೊಂದು ಹೊರ ಬಿದ್ದಿದೆ. ಫೈಬರ್ನಿಂದ ಮೂರ್ತಿಯನ್ನು ನಿರ್ಮಿಸಿ ಕಂಚಿನಿಂದ ಮೂರ್ತಿ ನಿರ್ಮಾಣ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಅಂದಿನ ಸಚಿವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಮೇಲೆ ಆರೋಪ ಮಾಡಿತ್ತು. ಸದ್ಯ ಪ್ರಕರಣದ ತನಿಖೆ ನಡೆದಿದ್ದು ತಜ್ಞರ ಪರಿಶೀಲನ ವರದಿ ಮತ್ತು ಸಮಗ್ರ ತನಿಖೆ ಯಿಂದ ಮೂರ್ತಿಯನ್ನ ನಿರ್ಮಿಸಿದ ಶಿಲ್ಪಿಯು ಕಂಚಿನ ಬದಲು ಹಿತ್ತಾಳೆ ಲೋಹದಿಂದ ಮೂರ್ತಿ ನಿರ್ಮಿಸಿರುವುದು ಸಾಬೀತಾಗಿದೆ.

ಈ ಹಿನ್ನಲೆಯಲ್ಲಿ ಮೂರ್ತಿ ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯ್ಕ್, ನಿರ್ಮಾಣದ ಜವಾಬ್ದಾರಿ ಹೊತ್ತ ಉಡುಪಿ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಡೈರೆಕ್ಟರ್ ಅರುಣ್ ಕುಮಾರ್ ಮತ್ತು ಇಂಜಿನಿಯರ್ ಸಚಿನ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪೊಲೀಸರು ಸಾವಿರದ231 ಪುಟಗಳ ದೋಷಾರೋಪ ಪಟ್ಟಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕಳೆದ ವರ್ಷ ಅಂದರೆ 2024ರ ಜೂನ್ 21ರಂದು ಕೃಷ್ಣ ಶೆಟ್ಟಿ ಎನ್ನುವವರು ನೀಡಿದ ದೂರಿನ ಅನ್ವಯ ಈ ಪ್ರಕರಣ ದಾಖಲಾಗಿತ್ತು. ದೂರಿನಲ್ಲಿ ಶಿಲ್ಪಿ ಕೃಷ್ಣ ನಾಯ್ಕ್ ಅವರು ಕ್ರಿಶ್ ಆರ್ಟ್ ಓಲ್ಡ್ ಸಂಸ್ಥೆಯ ಮೂಲಕ ಕಂಚಿನ ಪರಶುರಾಮ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದು ನಕಲಿ ಮೂರ್ತಿ ನಿರ್ಮಿಸಿ ಸರಕಾರಕ್ಕೆ ವಂಚಿಸಿದ್ದಾರೆ ಎಂದು ನಮೂದಿಸಲಾಗಿತ್ತು.

ದಾಖಲಾದ ದೂರಿನ ಹಿನ್ನಲೆ ತನಿಖೆ ನಡೆದು ಸದ್ಯ ಮೂರ್ತಿ ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎನ್ನುವುದು ಸಾಬೀತಾಗಿದೆ. ಇನ್ನು ಪ್ರಾಜೆಕ್ಟ್ ಡೈರೆಕ್ಟರ್ ಮತ್ತು ಎಂಜಿನಿಯರ್ ಅವರು ಕೆಲಸದ ಆದೇಶದಲ್ಲಿರುವ ಶರತ್ತುಗಳನ್ನು ಪಾಲಿಸಿಲ್ಲ ಎನ್ನುವುದು ಕೂಡ ತನಿಖೆಯಲ್ಲಿ ಬಹಿರಂಗವಾಗಿದೆ. ಇನ್ನು 2,23ರ ಅಕ್ಟೋಬರ್ 12ರಂದು ಪರುಶುರಾಮ ಮೂರ್ತಿಯ ಸೊಂಟದಿಂದ ಮೇಲ್ಭಾಗವನ್ನ ಉಮಿಕಲ್ ಬೆಟ್ಟದಿಂದ ಕಳಚಿ, ಉಡುಪಿ ಅಲೆಯೂರು ಗ್ರಾಮದ ಪ್ರಗತಿ ನಗರದಲ್ಲಿರುವ ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿದ ಶೆಡ್ನಲ್ಲಿ ಇರಿಸಲಾಗಿತ್ತು. ಸುಮಾರು ನಾಲ್ಕು ತಿಂಗಳುಗಳ ಕಾಲ ಅದೇ ಶೆಡ್ ನಲ್ಲಿದ್ದ ಮೂರ್ತಿಯ ಭಾಗವನ್ನ ಕೃಷ್ಣ ನಾಯ್ಕ್ ಅವರು ಬೆಂಗಳೂರಿನಲ್ಲಿರುವ ತಮ್ಮ ಕ್ರಿಶ್ ಆರ್ಟ್ ವರ್ಡ್ ಗೆ ಸಾಗಿಸಿದ್ದಾರೆ ಎಂದು ತಪ್ಪು ಮಾಹಿತಿ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯಕ್ ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಮತ್ತು ಎಂಜಿನಿಯರ್ ಸಚಿನ್ ವೈ ಕುಮಾರ್ ಅವರ ವಿರುದ್ಧ ನಂಬಿಕೆ ದ್ರೋಹ ವಂಚನೆ ಒಳಸಂಚು ಸಾಕ್ಷಿ ನಾಶ ಮಾಡಿದ್ದಾರೆ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ದಾಖಲಿಸಿದ್ದಾರೆ.

ಇನ್ನು ತನಿಖೆ ಕುರಿತು ಹೇಳಿಕೆ ನೀಡಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್ , ಪರಶುರಾಮ ಥೀಂ ಪಾರ್ಕ್ ಹಾಗೂ ಪ್ರತಿಮೆಯ ಬಗ್ಗೆ ಕಾಂಗ್ರೆಸಿಗರು ನಡೆಸುತ್ತಿದ್ದ ನಿರಂತರ ಅಪಮಾನಕ್ಕೆ ಸೋಲಾಗಿದೆ. ಪ್ರತಿಮೆ ಫೈಬರ್ ದು ಎಂದು ನಡೆಸುತ್ತಿದ್ದ ಟೂಲ್ ಕಿಟ್ ಅಪಪ್ರಚಾರ ಸುಳ್ಳು ಎಂಬುದು ಪೊಲೀಸ್ ತನಿಖೆಯಿಂದಲೇ ಸಾಬೀತಾಗಿದೆ. ಪ್ರತಿಮೆಯನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಪರಶುರಾಮನ ಪ್ರತಿಮೆಯ ಸೊಂಟದ ಮೇಲ್ಭಾಗವನ್ನು ಮರು ವಿನ್ಯಾಸ ಉದ್ದೇಶದಿಂದ ತೆಗೆದಿದ್ದು ಎಂಬುದನ್ನೂ ನ್ಯಾಯಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಇದರಿಂದ ಪ್ರತಿಮೆ ಫೈಬರ್ ದು ಎಂಬ ವ್ಯವಸ್ಥಿತ ಪಿತೂರಿಗೆ ಸೋಲಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ಪರಶುರಾಮ ಥೀಂ ಪಾರ್ಕ್ ಗೆ ನಿಗದಿ ಮಾಡಿದ್ದ ಅನುದಾನವನ್ನು ಬಿಡುಗಡೆ ಮಾಡುವ ಜತೆಗೆ ಈ ತಾಣವನ್ನು ಪ್ರವಾಸೋದ್ಯಮಕ್ಕೆ ಮತ್ತೆ ತೆರೆಯಬೇಕು. ಅಭಿವೃದ್ಧಿ ವಿಚಾರದಲ್ಲಿ ನಡೆಸುವ ದ್ವೇಷದ ರಾಜಕಾರಣಕ್ಕೆ ತೆರೆ ಬೀಳಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.