ಉಡುಪಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮಾಜದ ತಳಮಟ್ಟದ ಕಟ್ಟಕಡೆಯ ಅರ್ಹ ವ್ಯಕ್ತಿಗೂ ತಲುಪಿಸುವ ಉದ್ದೇಶದಿಂದ ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವತಿಯಿಂದ ನಮ್ಮ ನಡೆ ವಾರ್ಡ್ ಕಡೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು.

ಅವರು ಇಂದ್ರಾಳಿಯ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಉಡುಪಿ ತಾಲೂಕು ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಿದಾಗ ಮಾತ್ರ ಅವುಗಳ ಸಮರ್ಪಕ ಅನುಷ್ಠಾನ ಸಾಧ್ಯ ಎಂದು ಹೇಳಿದರು.

‘ನಮ್ಮ ನಡೆ ವಾರ್ಡ್ ಕಡೆಗೆ’ ಕಾರ್ಯಕ್ರಮದ ಮೂಲಕ ವಾರ್ಡ್ ಮಟ್ಟದಲ್ಲಿ ಮನೆಮನೆಗೆ ಭೇಟಿ ನೀಡಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದರು.

ಸಮಿತಿಯ ಸದಸ್ಯ ಡಾ. ಸಂತೋಷ್ ಕುಮಾರ್ ಬೈರಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಅನುಷ್ಠಾನ ಸಮಿತಿಯ ಸದಸ್ಯರಾದ ಶಬರೀಷ್ ಸುವರ್ಣ, ಈಶ್ವರನಗರ ವಾರ್ಡಿನ ಪ್ರೇಮಲತಾ, ಅರ್ಚನಾ ದೇವಾಡಿಗ, ಸುಧಾಕರ್ ಪೂಜಾರಿ, ಪಂಚ ಗ್ಯಾರಂಟಿ ಯೋಜನೆಗಳ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



