ಉಡುಪಿ : ತೆಂಕ ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿಯಾದ ರಜನಿ ಅವರ ಸಹಿಯನ್ನು ನಕಲು ಮಾಡಿ,ಪಂಚಾಯತ್ಬ ಲೆಟರ್ಹೆಡ್ ಮತ್ತು ಅಧಿಕೃತ ಸೀಲನ್ನು ದುರುಪಯೋಗಪಡಿಸಿಕೊಂಡು ದೃಢಪತ್ರ ಸಿದ್ಧಪಡಿಸಲಾಗಿದೆ ಎಂಬ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಡಿಸೆಂಬರ್ 6 ರಂದು ಪಡುಬಿದ್ರಿ ಪೊಲೀಸ್ ಠಾಣೆಗೆ ಪಿಡಿಓ ಅವರು ಅಧಿಕೃತ ದೂರು ಸಲ್ಲಿಸಿದ್ದಾರೆ.

ಸಾರ್ವಜನಿಕರಿಂದ ತಮ್ಮ ಸಹಿ ಇರುವ ದಾಖಲೆ ದುರುಪಯೋಗವಾಗಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪಿಡಿಓ ಅವರು ಪರಿಶೀಲನೆ ನಡೆಸಿದ್ದು, ಮೂಲ್ಕಿ ಉಪ-ನೊಂದಣಾಧಿಕಾರಿಗಳ ಕಚೇರಿಯಲ್ಲಿ ತೆಂ.ಗ್ರಾ.ಪಂ 003/2025-26 ನಂಬರಿನ, ದಿನಾಂಕವಿಲ್ಲದ ತೆಂಕ ಗ್ರಾಮ ಪಂಚಾಯತ್ ಲೆಟರ್ಹೆಡ್ನಲ್ಲಿ ಜೆರಾಕ್ಸ್ ದೃಢಪತ್ರ ಪತ್ತೆಯಾಗಿದೆ. ಉಡುಪಿ ಜಿಲ್ಲೆ ಕಾಪು ತಾಲೂಕು ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ 7ನೇ ವಾರ್ಡಿನ ಸರ್ವೇ ನಂ. 56/2ರಲ್ಲಿ ಗಿರಿಯಪ್ಪ ಕೋಟ್ಯಾನ್ ಅವರ ಹೆಸರಿನ ಕಟ್ಟಡ (ನಂ. 7-5) ಸುಮಾರು 800 ಚದರ ಅಡಿ, ನೆಲಕ್ಕೆ ಟೈಲ್ಸ್ ಅಳವಡಿಸಲಾಗಿದೆ ಎಂದು ‘ದೃಢಪಡಿಸಲಾಗಿದೆ’ ಎಂದು ದಾಖಲಾಗಿದೆ. ಆದರೆ, ಆ ದೃಢಪತ್ರದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸೀಲು ಹಾಗೂ ನಕಲಿ ಸಹಿ ಇರುವುದಾಗಿ ಪಿಡಿಓ ದೂರು ತಿಳಿಸಿದ್ದಾರೆ.

ನಮೂನೆ 11ಬಿ ಫಾರ್ಮ್ ಜೂನ್ ರಿಂದ ಡಿಸೆಂಬರ್ 1ರವರೆಗೆ ಬಂದ್ ಆಗಿರುವ ಸಮಯದಲ್ಲಿ, ಕೆಲವು ಸಿಬ್ಬಂದಿ ದುರುದ್ದೇಶದಿಂದ ಲೆಟರ್ಹೆಡ್ ಹಾಗೂ ಸೀಲ್ ದುರ್ಬಳಕೆ ಮಾಡಿ, 11B ಫಾರ್ಮ್ ಬದಲಿಗೆ ನಕಲಿ ದೃಢಪತ್ರ ನೀಡಿ ಮೋಸ ಮಾಡಿದ್ದಾರೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.



