ಉಡುಪಿ: ಗ್ರಾಮ ಸ್ವರಾಜ್ ಪತ್ರಿಷ್ಠಾನ(ರಿ.) ವತಿಯಿಂದ ದಕ್ಷಿಣ ಕನ್ನಡ & ಉಡುಪಿ ಜಿ.ಪಂ ಹಾಗು ಇತರ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಪಂಚಾಯತ್, ನಗರ ಸ್ಥಳೀಯಾಡಳಿತದ ಚುನಾಯಿತ ಜನಪ್ರತಿನಿಧಿಗಳು ಹಾಗು ಸಿಬ್ಬಂದಿಗಳ ಕ್ರೀಡೊತ್ಸವ – ಸಾಂಸ್ಕೃತಿಕ ಸ್ಪರ್ಧೆಗಳು “ಹೊಂಬೆಳಕು – 2025” ಸ್ಥಳೀಯಾಡಳಿತ ಸಂಭ್ರಮ ಕಾರ್ಯಕ್ರಮವು ಫೆ.22 ರಂದು ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಈ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿಯವರು ಮಾಹಿತಿಯನ್ನು ವಿವರಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಸಂಸದ ಬಿ.ಸಿ ಚಂದ್ರಶೇಖರ್ ಕ್ರೀಡಾ ಜ್ಯೋತಿ ಸ್ವೀಕರಿಸಿ, ಪಥಸಂಚಲನಕ್ಕೆ ಚಾಲನೆ ನೀಡುವರು. ಕನ್ನಡ & ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್.ಎಸ್.ತಂಗಡಗಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸ್ಪೀಕರ್ ಯು.ಟಿ.ಖಾದರ್, ಸಚಿವ ದಿನೇಶ್ ಗುಂಡುರಾವ್ ಸೇರಿದಂತೆ ರಾಜ್ಯ ಸರಕಾರದ ಸಚಿವರು, ದ.ಕ & ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಉಪಸ್ಥಿತರಿರಲಿದ್ದಾರೆ ಎಂದರು. ಶಾಸಕ ಮಂಜುನಾಥ್ ಭಂಡಾರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಕೋಟ ಶ್ರೀನಿವಾಸ್ ಪೂಜಾರಿಯವರು ಆರಂಭಿಸಿದ ಕಾರ್ಯಕ್ರಮ ಇದಾಗಿದ್ದು, ತಾನು ಪರಿಷತ್ ಸದಸ್ಯನಾದ ಬಳಿಕ ದ.ಕ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸುವಂತೆ ಗ್ರಾ.ಪಂ ಸಿಬ್ಬಂದಿ, ಜನಪ್ರತಿನಿಧಿಗಳು ಬೇಡಿಕೆ ಇಟ್ಟರು. ಹೀಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸುಮಾರು 75 ಲಕ್ಷ ರೂ ಖರ್ಚು ಅಂದಾಜಿಸಲಾಗಿದೆ ಎಂದರು. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರು ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ವಿಸ್ತರಿಸುವ ಸಲುವಾಗಿ ಪೈಲೆಟ್ ಕಾರ್ಯಕಮವನ್ನಾಗಿಸುವಂತೆ ತಿಳಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ರೀತಿಯ ಕಾರ್ಯಕ್ರಮ ನಡೆಯುವ ನಿರೀಕ್ಷೆ ಇದೆ ಎಂದರು.
ದ.ಕ & ಉಡುಪಿ ಜಿಲ್ಲೆಯ ಪಂಚಾಯತ್, ನಗರ ಸ್ಥಳೀಯಾಡಳಿತದ ಸುಮಾರು 6,500 ಚುನಾಯಿತ ಜನಪ್ರತಿನಿಧಿಗಳು ಹಾಗು 2,000 ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರಸಾದ್‌ರಾಜ್ ಕಾಂಚನ್, ಅಶೋಕ್ ಕೊಡವೂರು, ರಾಜು ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ, ರೋಶಿನಿ ವಲಿವೇರಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.