ಉಡುಪಿ: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಕಾಮಿಡಿ ಕಿಲಾಡಿ ರಿಯಾಲಿಟಿ ಶೋ”ದ ಮೂಲಕ ವಿಶ್ವರೂಪ್ ಎಂದೇ ಖ್ಯಾತಿ ಪಡೆಯುವ ಮೂಲಕ ಮನೆ ಮಾತಾದ ರಾಕೇಶ್ ಪೂಜಾರಿ ಇನ್ನಿಲ್ಲ. ಈ ಸುದ್ದಿ ಂದು ರಾಜ್ಯದ ಮೂಲೆ ಮೂಲೆಗ ತಲುಪಿ ಪ್ರತಿಯೋರ್ವ ಅಭೀಮಾನಿಯೂ ಕೂಡ ಕಣ್ಣೀರಾಗಿದ್ದಾರೆ. ಉಡುಪಿಯ ಮಲ್ಪೆ ಹೂಡೆಯ ನಿವಾಸಿ ರಾಕೇಶ್ ಪೂಜಾರಿ (33) ನಿಧನ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಾವಿರಾರು ಜನರು ಹೂಡೆಯ ಆತನ ಮನೆಗೆ ಭೇಟಿ ಪಾರ್ಥಿವ ಶರೀರಕ್ಕೆ ಮುತ್ತಿಕ್ಕಿ, ಅಂತಿಮ ನಮನ ಸಲ್ಲಿಸಿದರು. ಮೃತರು ತಾಯಿ ಶಾಂಭಾವಿ, ಸಹೋದರಿ ರಕ್ಷಿತಾರನ್ನು ಅಗಲಿದ್ದಾರೆ.

ಭಾನುವಾರ ರಾತ್ರಿ ಕಾರ್ಕಳ ನಿಟ್ಟೆ ಸಮೀಪದ ಮಿಯ್ಯಾರ್ನ ಸ್ನೇಹಿತನ ಮನೆಯಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಸೋಮವಾರ ಬೆಳಗ್ಗೆ ಕಾರ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ತೆರೆದ ವಾಹನದಲ್ಲಿ ಹೂಡೆಯ ಮನೆಗೆ ಕರೆತರಲಾಗಿದೆ.

ರಾಕೇಶ್ ಅವರು ತಮ್ಮ ನಟನಾ ಪಯಣ ಆರಂಭಿಸಿದ್ದು ‘ಚೈತನ್ಯ ಕಲಾವಿದರು’ ನಾಟಕ ತಂಡದ ಮೂಲಕ. ಬಳಿಕ 2014 ರಲ್ಲಿ ಖಾಸಗಿ ಚಾನೆಲ್ ನಲ್ಲಿ ‘ಕಡ್ಲೆ ಬಜಿಲ್’ ಎಂಬ ತುಳು ರಿಯಾಲಿಟಿ ಶೋ ಮೂಲಕ ಅನೇಕ ಜನರ ಮನ ಗೆದ್ದಿದ್ದರು. ನಂತರ ಹಲವು ಸಿನಿಮಾಗಳಿಗೆ ಆಡಿಷನ್ ನೀಡಿದರು. ಸುಮಾರು 150 ಆಡಿಷನ್ ನೀಡಿದ್ದ ರಾಕೇಶ್ ಪೂಜಾರಿ 2018 ರಲ್ಲಿ ಜೀ ಕನ್ನಡ ‘ಕಾಮಿಡಿ ಕಿಲಾಡಿಗಳು ಸೀಸನ್ 2’ ಶೋಗೆ ಆಯ್ಕೆಯಾಗಿದ್ದರು. ಇದರಲ್ಲಿ ರನ್ನರ್ ಅಪ್ ತಂಡದ ಸದಸ್ಯರಾಗಿದ್ದರು. ಬಳಿಕ 2020ರಲ್ಲಿ ‘ಕಾಮಿಡಿ ಕಿಲಾಡಿಗಳು ಸೀಸನ್ 3’ ವಿಜೇತರಾಗಿದ್ದರು. ರಾಕೇಶ್ ಅವರು ಕನ್ನಡ ಮತ್ತು ತುಳುವಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಕೇಶ್ ಕನ್ನಡದಲ್ಲಿ ‘ಪೈಲ್ವಾನ್’, ‘ಇದು ಎಂಥಾ ಲೋಕವಯ್ಯ’ ಚಿತ್ರಗಳಲ್ಲಿ ನಟಿಸಿದ್ದಾರೆ. ತುಳು ಭಾಷೆಯ ‘ಪೆಟ್ಕಮ್ಮಿ’, ‘ಅಮ್ಮೆರ್ ಪೊಲೀಸ್’, ‘ಪಮ್ಮನ್ನೆ ದಿ ಗ್ರೇಟ್’, ‘ಉಮಿಲ್’, ‘ಇಲ್ಲೋಕ್ಕೆಲ್’ ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ಇನ್ನು ಕರಾವಳಿಯ ರಿಯಾಲಿಟಿ ಶೋಗಳಾದ ‘ಬಲೆ ತೇಲಿಪಾಲೆ’, ‘ಮೇ 22’, ‘ಸ್ಟಾರ್’, ‘ತುಯಿನಾಯೆ ಪೋಯೆ’ ಸೇರಿದಂತೆ ಕೆಲ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಕನ್ನಡದ ಕಿರುತೆರೆಯಲ್ಲಿ ಕಾಮಿಡಿ ಸ್ಟಾರ್ ಆಗಿ ಮಿಂಚಿದ್ದರು.

ಹೂಡೆಯ ಮನೆಯಲ್ಲಿ ಧಾರ್ಮಿಕ ವಿಧಿವಿಧಾನ ಪೂರೈಸಿದ ಬಳಿಕ ಹೂಡೆ ಸಮುದ್ರ ತೀರದ ಮೈದಾನದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮನೆಯಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಮೈದಾನಕ್ಕೆ ಕರೆತರಲಾಯಿತು. ಸಾವಿರಾರು ಜನರು ನಗುವಿನ ಮಾಂತ್ರಿಕನ ಮೌನವನ್ನು ಕಂಡು ಕಂಬನಿ ಮಿಡಿದರು. ನಂತರ ಸಮೀಪದ ರುದ್ರಭೂಮಿಯಲ್ಲಿ ಅಗ್ನಿಸ್ಪರ್ಶ ಮಾಡಲಾಯಿತು. ಅಗಲಿದ ಆತ್ಮೀಯನಿಗೆ ಅಂತಿಮ ಸಲ್ಲಿಸಕು ಕಲಾವಿದರ ದಂಡೆ ಹರಿದು ಬಂದಿತ್ತು. ರಕ್ಷಿತಾ ಪ್ರೇಮ್, ನಿರೂಪಕಿ ಅನುಶ್ರೀ, ಸಂಗೀತ ನಿರ್ದೇಶಕ ಯೋಗರಾಜ್ ಭಟ್, ಕಾಮಿಡಿ ಕಿಲಾಡಿಗಳ ತಂಡದ ಶಿವರಾಜ್ ಕೆಆರ್ ಪೇಟೆ, ನಯನಾ, ವಾಣಿ, ಸೂರಜ್, ಹಿತೇಶ್, ಅನೀಶ್, ಬಿಗ್ ಬಾಸ್ ಖ್ಯಾತಿಯ ಧನರಾಜ್, ತುಕಾಲಿ ಸಂತು ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು. ಶಾಸಕ ಯಶ್ಪಾಲ್, ಮಾಜಿ ಶಾಸಕ ರಘುಪತಿ ಭಟ್, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಭೇಟಿ ನೀಡಿದರು.

ತಂಗಿಗೆ ಮದುವೆ ಮಾಡುವ ಕನಸಿನೊಂದಿಗೆ ಪಂಚಭೂತಗಳಲ್ಲಿ ಲೀನ
ಕಳೆದ ಎರಡು ವರ್ಷದ ಹಿಂದೆ ರಾಕೇಶ್ ಅವರ ತಂದೆ ಮೃತಪಟ್ಟ ಬಳಿಕ ಹಿರಿಯ ಮಗನಾಗಿ. ಕುಟುಂಬದ ಸಂಪೂರ್ಣ ಜವಾಬ್ದಾರಿ ಆತನ ಹೆಗಲಿಗೇರಿತ್ತು. ಸಹೋದರಿ ರಕ್ಷಿತಾ ಅವರಿಗೆ ಮದುವೆ ಮಾಡಿಸುವುದೇ ರಾಕೇಶ್ ಅವರ ಕನಸಾಗಿತ್ತು. ಅದ್ದೂರಿ ವಿವಾಹ ಮಾಡಿಸಿ, ಅವರ ಸಂತೋಷದ ದಾಂಪತ್ಯ ಜೀವನವನ್ನು ಕಣ್ತುಂಬಿಕೊಳ್ಳುವ ಆಸೆ ಇತ್ತು. ಆದರೆ ವಿಧಿಯ ಲೆಕ್ಕಾಚಾರವೇ ಬೇರೆ ಇತ್ತು. ರಾಕೇಶ್ ಅವರ ಕಾಮಿಡಿ ಕಿಲಾಡಿಗಳು ಜೊತೆಗಾರರು ಗೆಳೆಯ ಆಸೆಗೆ ಬೆನ್ನುಲುಬಾಗಿ ಕಲಾವಿದನ ಕನಸು ನನಸಾಗಿಸಿ ಎಂದು ಕಣ್ಣೀರು ಹಾಕಿದ್ದು ಕರಳು ಹಿಂಡಿ ಬರುವಂತೆ ಇತ್ತು



