Friday, July 4, 2025

spot_img

ನೈಕಂಬ್ಳಿ ಶಾಲೆಯ ಮಕ್ಕಳಿಗೊಂದು ಸೇತುವೆ ಕೊಡಿ…

ಉಡುಪಿ : ಇಲ್ಲೇ ಜೋರಾಗಿ ಮಳೆ ಬಂದರೆ ಮಕ್ಕಳು ಶಾಲೆಗೆ ಹೋಗುವುದೇ ಅಸಾಧ್ಯ, ಇನ್ನು ಕೃಷಿಕರ ಪಾಡು ಅಂತೂ ಹೇಳ ತೀರದು. ಕಳೆದ ಬಾರಿ ಸುರಿದ ಭೀಕರ ಮಳೆಗೆ ಇಲ್ಲಿ ಸಂಪರ್ಕ ಸಾಧನವಾಗಿದ್ದ ಮರದ ಕಾಲು ಸೇತುವೆ ಕೊಚ್ಚಿ ಹೋಗಿ ಸುಮಾರು 15 ದಿನಗಳ ಕಾಲ ಶಾಲೆ ಬಂದ್ ಆಗಿತ್ತು. ಇಲ್ಲಿನ ಸಮಸ್ಯೆಯ ಬಗ್ಗೆ ಎರಡು ಅವಧಿಯ ಶಾಸಕರ ಗಳಿಗೆ ಮನವಿ ಸಲ್ಲಿಸಿ ಇಲ್ಲಿನ ಜನ ಹೈರಾಣ ಆಗಿದ್ದಾರೆ. ಅಂದ ಹಾಗೆ ಚಿತ್ರದಲ್ಲಿ ಕಾಣುತ್ತಿರುವ ಈ ಮರದ ಸೇತುವೆ ಇರುವುದು ಕುಂದಾಪುರ ತಾಲೂಕು ನೈಕಂಬ್ಳಿ ಎಂಬ ಪ್ರದೇಶದಲ್ಲಿ…

ಕುಂದಾಪುರ ತಾಲೂಕು ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಈ ನೈಕಂಬ್ಳಿ ಎನ್ನುವ ಪ್ರದೇಶ ಪ್ರಾಕೃತಿಕವಾಗಿ ಅತ್ಯಂತ ಸುಂದರವಾಗಿರುವ ಪ್ರದೇಶ ಎಂದರೆ ತಪ್ಪಾಗಲಾರದು. ಎತ್ತ ನೋಡಿದರತ್ತ ಹಸಿರು ಚಾಪೆ ಹಾಸಿದಂತೆ ಕಾಣುವ ಗಿಡಮರ ಗದ್ದೆ ಸಾಲುಗಳು. ಹಸಿರನ್ನು ಸೀಳಿಕೊಂಡು ಹೋಗುವಂತೆ ಬಾಸವಾಗುತ್ತಿರುವ ಹೊಸದಾಗಿ ನಿರ್ಮಾಣವಾಗಿರುವ ಡಾಂಬರ್ ರಸ್ತೆ. ಊರಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನೈಕಂಬ್ಳಿ ಸರಕಾರಿ ಕಿರಿಯ ಪ್ರಾಥಮಿಕ  ಶಾಲೆಯ ಆವರಣದಲ್ಲಿ ಇರುವ ಅಂಗನವಾಡಿ, ಹೀಗೆ ಒಂದು ಪೋಸ್ಟರ್ ನಲ್ಲಿ ಕಂಡಂತೆ ಕಾಣಿಸುವಂತಹ ಊರು ಇದು. ಅದರಲ್ಲೂ ಮಳೆಗಾಲದಲ್ಲಂತೂ ಅತ್ಯಂತ ಹಸಿರುಮಯವಾಗಿ ಕಾಣುವ ಈ ಪ್ರದೇಶ ನೋಡಲು ಅಷ್ಟೇ ಸೊಬಗು ಇರುವ ಪ್ರದೇಶ. ನೋಡಲು ಎಷ್ಟು ಸುಂದರವಾಗಿ ಕಾಣುತ್ತಿರುವ ಈ  ನೈಕಂಬ್ಳಿ ಎನ್ನುವ  ಊರಿನಲ್ಲಿ ಮಳೆಗಾಲ ಬಂತಂದರೆ ಸಾಕು ಭೂತದಂತೆ ಕಾಡುವ ವಿಚಾರ ಎಂದರೆ ಅದು ಕಾಲು ಸಂಕ. ಇದು ಈ ಊರಿನ ಪ್ರಮುಖ ಸಂಪರ್ಕ ಸಾಧನ, ಮೂಲಭೂತ ಸಾಧನ ಎಂದರು ತಪ್ಪಾಗಲಾರದು. ಇದೊಂದು ಇಲ್ಲದೆ ಹೋಗಿದ್ದರೆ ಕೃಷಿಕರು 10 ಕಿ.ಮೀ ಸುತ್ತುವರಿದು ಕೃಷಿ ಭೂಮಿಗೆ, ಶಾಲಾ ವಿದ್ಯಾರ್ಥಿಗಳು 10 ಕಿ.ಮೀ ಸುತ್ತುವರಿದು ಶಾಲೆಗೆ ಹೋಗಬೇಕಾದ ಸ್ಥಿತಿ ಇಲ್ಲಿದೆ.

ಪ್ರತಿ ಮಳೆಗಾಲದಲ್ಲೂ ಕೂಡ ಇಲ್ಲಿ ಹರಿಯುವ ತೊರೆಯ ನೀರು ಉಕ್ಕಿ ನೆರೆಹಾವಳಿ ಕಾಣಿಸಿಕೊಳ್ಳುವುದು ಮಾಮೂಲು. ಆ ಸಂದರ್ಭದಲ್ಲಿ ಇಲ್ಲಿ ಸಂಪರ್ಕ ಸಂಪೂರ್ಣ ಕಡಿತಗೊಂಡು ಕೆಲವೊಂದು ಪ್ರದೇಶಗಳಿಗೆ ದಿಗ್ಬಂದನ ಹಾಕಿದ ಸ್ಥಿತಿ ನಿರ್ಮಾಣವಾಗುತ್ತದೆ. ಕಳೆದ ಮಳೆಗಾಲದಲ್ಲಿ ಭಾರಿ ಮಳೆ ಬಿದ್ದ ಪರಿಣಾಮ ಇಲ್ಲಿನ ತೊರೆ ಉಕ್ಕಿ ಹರಿದು ಸಂಪರ್ಕಕ್ಕೆ ಒಂದೇ ಇದ್ದ ಏಕಮೇವ ಅದ್ವಿತೀಯ ಮರದ ಸೇತುವೆ ಕೊಚ್ಚಿ ತೊರೆಯ ಪಾಲಾಗಿತ್ತು. ಆ ಸಂದರ್ಭದಲ್ಲಿ ಬೈಂದೂರು ಶಾಸಕರಿಗೆ ಇಲ್ಲಿನ ಸಮಸ್ಯೆಯನ್ನ ಮನವರಿಕೆ ಮಾಡುವ ಪ್ರಯತ್ನವನ್ನ ಸ್ಥಳೀಯರು ಮಾಡಿದ್ದರು. ಅದರಲ್ಲೂ ಕೆಲವೊಂದಿಷ್ಟು ಮಾಧ್ಯಮ ಮಾಧ್ಯಮಗಳು ಕೂಡ ಈ ಸಮಸ್ಯೆಯನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಶ್ರಮಿಸಿದ್ದವು. ಸಾಕಷ್ಟು ಮನವಿ ಬೇಡಿಕೆಗಳ ಬಳಿಕವು ಈ ವರ್ಷವೂ ಕೂಡ ಇಲ್ಲಿ ಸೇತುವೆ ಮಾಡುವ ಮನಸ್ಸು ಜನಪ್ರತಿನಿಧಿಗಳ ಗಳಿಗಾಗಲಿ ಇಲಾಖೆಯ ಅಧಿಕಾರಿಗಳಿಗಾಗಲಿ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಮತ್ತೆ ಕೊಚ್ಚಿ ಹೋಗಿದ್ದ ಮರದ ಸೇತುವೆಯನ್ನೇ ಊರಿನ ಜನ ಎತ್ತಿ ತಂದು ಅದೇ ಸ್ಥಳದಲ್ಲಿಟ್ಟು ಸಂಚಾರ ಮಾಡುವಂತಾಗಿದೆ.

ಕಳೆದ ಮಳೆಗಾಲದಲ್ಲಿ ಸೇತುವೆ ಕೊಚ್ಚಿ ಹೋಗಿ ಸುಮಾರು 15 ದಿನಗಳ ಕಾಲ ಶಾಲೆಗೆ ರಜೆ ಘೋಷಿಸಲಾಗಿತ್ತು. ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆಗೆ ಬರುವ ಬಹುತೇಕ ಮಕ್ಕಳು ಸೇತುವೆಯ ಆಚೆ ದಡದಿಂದ ಈಚೆ ಬರಬೇಕು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕುರಿತು ಕಾಳಜಿ ಇರುವ  ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಮನಸ್ಸು ಮಾಡುತ್ತಿಲ್ಲ ಎನ್ನುತ್ತಾರೆ ಶಿಕ್ಷಕರು. ಸೇತುವೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಈ ನ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ.
ಒಟ್ಟಾರೆಯಾಗಿ ಇಲ್ಲಿನ ಸಮಸ್ಯೆ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಕಿವಿಗೆ ಇದುವರೆಗೆ ಬಿದ್ದಂತೆ ಕಾಣುತ್ತಿಲ್ಲ. ಈ ಮಳೆಗಾಲದಲ್ಲಿ ಭರ್ಜರಿ ಮಳೆಯಾಗುವ ಎಲ್ಲಾ ಲಕ್ಷಣಗಳು ಇದೆ. ಇಲ್ಲಿ ಯಾವುದೇ ಪ್ರಾಣ ಹಾನಿ ಆಗುವ ಮೊದಲೇ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರು ಎಚ್ಚೆತ್ತು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಮತ್ತು ಜನರ ಮನವಿಗೆ ಸ್ಪಂದಿಸಬೇಕು ಎನ್ನುವುದು ನಮ್ಮ ಆಶಯ.

ಎರಡು ಅವಧಿಯಲ್ಲಿ ನಾವು ಸಾಕಷ್ಟು ಬಾರಿ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಇಲ್ಲಿನ ವಿದ್ಯಾರ್ಥಿಗಳಿಂದ ಹಿಡಿದು ಪ್ರತಿಯೊಬ್ಬರ ಗ್ರಾಮಸ್ಥರಿಗೂ ಕೂಡ ಈ ಮರದ ಕಾಲು ಸಂಕವೇ ಸಂಪರ್ಕ ಸಾಧನ. ಕಳೆದ ಬಾರಿ ಭಾರಿ ಮಳೆಗೆ ಈ ಮರದ ಸೇತುವೆ ಕೊಚ್ಚಿ ಹೋಗಿತ್ತು, ಈ ವರ್ಷ ಇಲ್ಲಿ ಹೊಸ ಸೇತುವೆ ನಿರ್ಮಾಣವಾಗಬಹುದು ಎನ್ನುವ ಆಸೆ ಇತ್ತು. ಆದರೆ ಯಾವುದೇ ಸೇತುವೆ ನಿರ್ಮಾಣ ಕಾರ್ಯ ಇಲ್ಲಿ ನಡೆದಿಲ್ಲ ಮತ್ತೆ ಅದೇ ಮುರಿದ ಮರದ ಕಾಲು ಸಂಕವೇ ಗತಿಯನ್ನು ವಂತಾಗಿದೆ…

ಶೋಭ ಶೆಟ್ಟಿ ( ಸ್ಥಳೀಯರು)

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles