ಉಡುಪಿ : ಬ್ರಹ್ಮಾವರ ಪೊಲೀಸರ ವ್ಯಾಪ್ತಿಯಲ್ಲಿ ನೇಪಾಳ ಮೂಲದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಸೂರಜ್ ಬಾಹುಲ್ (28) ಎಂದು ಗುರುತಿಸಲಾಗಿದೆ.

ಸೂರಜ್ ಬಾಹುಲ್ ಅವರು ಕಳೆದ ಐದು ವರ್ಷಗಳಿಂದ ಬ್ರಹ್ಮಾವರದ ಧರ್ಮಾವರಂ ಕ್ಲಾಸಿಕ್ ಗಾರ್ಡನ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದರು. ನವೆಂಬರ್ 14ರಂದು ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ, ಪಿವಿಆರ್ ಬಿರಿಯಾನಿ ಪಾಯಿಂಟ್ ಎದುರು ರಸ್ತೆ ಬದಿಯಲ್ಲಿ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಸೂರಜ್ ಪತ್ತೆಯಾಗಿದೆ.
ನವೆಂಬರ್13ರ ರಾತ್ರಿ 12.00ರಿಂದ 14ರ ಬೆಳಿಗ್ಗೆ 6.00ರ ನಡುವೆ ಯಾವುದೋ ವೈಯಕ್ತಿಕ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.



