ಉಡುಪಿ: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣೆಗೆ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೂ.19 & 20 ರಂದು ದಿನ ನಿಗದಿ ಪಡಿಸಿದೆ. ಆರೋಪಿ ಸಲ್ಲಿಸಿದ್ದ, ಪ್ರಕರಣದ ಸಾಕ್ಷ್ಯಗಳ ವಿಚಾರಣೆಯ ಆಡಿಯೋ ಮತ್ತು ವಿಡಿಯೋ ದಾಖಲಿಸಬೇಕೆಂಬ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ತಿರಸ್ಕೃತಗೊಳಿಸಿತ್ತು. ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಈ ನಿಟ್ಟಿನಲ್ಲಿ ಸದ್ಯ ಸಾಕ್ಷಿಗಳ ವಿಚಾರಣೆಗೆ ದಿನ ನಿಗದಿ ಪಡಿಸುವುದು ಬೇಡ ಎಂದು ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ, ಈ ಸಂಬಂಧ ವಿಚಾರಣೆಗೆ ಹೈಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. ಈ ಪ್ರಕರಣದ ಸಾಕ್ಷಿಗಳ ವಿಚಾರಣೆ ಕಳೆದ ಜೂನ್ ತಿಂಗಳಲ್ಲಿಯೇ ಆರಂಭ ವಾಗಬೇಕಿತ್ತು. ಆದರೆ ಆರೋಪಿ ಒಂದಲ್ಲ ಒಂದು ಕಾರಣ ನೀಡಿ, ಅದನ್ನು ಮುಂದೂಡುತ್ತಿದ್ದಾರೆ. ಇದರಿಂದ ಸಂತ್ರಸ್ತರಿಗೆ ನ್ಯಾಯ ವಿಳಂಬವಾಗುತ್ತಿದೆ. ಆದುದರಿಂದ ಇವತ್ತೇ ಸಾಕ್ಷಿಗಳ ವಿಚಾರಣೆಗೆ ದಿನ ನಿಗದಿಪಡಿಸಬೇಕೆಂದು ಹೇಳಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಸಮಿವುಲ್ಲಾ, ಜೂ.19ರಂದು ದೂರುದಾರೆ ಹಾಗೂ ಒಂದನೇ ಸಾಕ್ಷಿಯ ವಿಚಾರಣೆ ಮತ್ತು ಜೂ.20ರಂದು ಎರಡು ಮತ್ತು ಮೂರನೇ ಸಾಕ್ಷಿಗಳ ವಿಚಾರಣೆಗೆ ದಿನ ನಿಗದಿಪಡಿಸಿದರು. ಆ ದಿನದಂದು ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ಖುದ್ಧು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅವರು ಆದೇಶ ನೀಡಿದರು.
ಏನಿದು ಪ್ರಕರಣ
2023ರ ನ.12ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನ ತೃಪ್ತಿ ಲೇಔಟ್ನಲ್ಲಿ ದೀಪಾವಳಿಯ ದಿನದಂದೆ ರಕ್ತದ ಓಕುಳಿ ಹರಿಸಿದಿತ್ತು. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಏಕ್ಸ್ಪ್ರೆಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರ ಸಾಂಗ್ಲಿ ಮೂಲದ ಪ್ರವೀಣ್ ಪ್ರದೀಪ್ ಚೌಗುಲೆ(40) ಎಂಬಾತ ಅದೇ ಸಂಸ್ಥೆಯಲ್ಲಿ ಗಗನಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೇಜಾರಿನ ನೂರ್ ಮುಹಮ್ಮದ್ರ ಪುತ್ರಿ ಐನಾಝ್(21)ಳ ಮೇಲಿನ ಅತೀಯಾದ ವ್ಯಾಮೋಹದಿಂದ ಕೊಲೆ ಯೋಜನೆ ರೂಪಿಸಿದ್ದ. ಮೊದಲೇ ಪ್ಲಾನ್ ಮಾಡಿ ಸುಳಿವು ಲಭಿಸದಂತೆ ತನ್ನ ಕಾರನ್ನು ಹೆಜಮಾಡಿ ಟೋಲ್ಗೆ ಮೊದಲೇ ನಿಲ್ಲಿಸಿ, ಅಟೊ, ಬಸ್, ಬೈಕ್ಗಳ ಮೂಲಕ ನೇಜಾರು ತಲುಪಿ. ಅಲ್ಲಿ ಬೆಳಗ್ಗೆ 9ಗಂಟೆ ಸುಮಾರಿಗೆ ಐನಾಝ್ ಮನೆಯೊಳಗೆ ಹೋದ ಪ್ರವೀಣ್, ಐನಾಝ್ ಮತ್ತು ತಡೆಯಲು ಬಂದ ಆಕೆಯ ತಾಯಿ ಹಸೀನಾ(48), ಅಕ್ಕ ಅಫ್ನಾನ್(23) ಹಾಗೂ ತಮ್ಮ ಆಸೀಮ್(13)ನನ್ನು ಬರ್ಬರವಾಗಿ ಚೂರಿಯಿಂದ ಕೊಲೆಗೈದು ಪರಾರಿಯಾಗಿದ್ದ. ಇದೇ ಸಂದರ್ಭ ಮನೆಯಲ್ಲಿದ್ದ ಹಸೀನಾರ ಅತ್ತೆ ಹಾಜಿರಾ(80) ಅವರಿಗೂ ಚೂರಿಯಿಂದ ಇರಿದಿದ್ದ್ದ ಕಿರಾತಕ. ಆದರೆ ಅದೃಷ್ಟವಶಾತ್ ಎನ್ನುವಂತೆ ಹಾಜಿರಾ ಚಿಕಿತ್ಸೆ ಪಡೆದ ಬಳಿಕ ಗುಣಮುಖರಾದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ.14ರಂದು ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಿದ್ದರು.