Saturday, February 28, 2026

spot_img

ನಿಷೇಧಾಜ್ಞೆ ನಡುವೆಯೂ 80 ಬಡಗುಬೆಟ್ಟಿನಲ್ಲಿ ಕಂಬಳ ಶಂಕುಸ್ಥಾಪನೆ..

ಉಡುಪಿ : ಕಾಪು ವಿಧಾನಸಭಾ ಕ್ಷೇತ್ರದ 80 ಬಡಗುಬೆಟ್ಟಿನಲ್ಲಿ ಆಯೋಜಿಸಲು ಉದ್ದೇಶಿಸಿರುವ ಉಡುಪಿ ಕಂಬಳ ಶಂಕುಸ್ಥಾಪನೆ ಕಾರ್ಯಕ್ರಮವು ಕಾಂಗ್ರೆಸ್–ಬಿಜೆಪಿ ರಾಜಕೀಯ ಕಚ್ಚಾಟದ ನಡುವೆಯೂ ಶನಿವಾರ ಪೂರ್ವನಿಗದಿಯಂತೆ ನೆರವೇರಿತು. ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಯಾವುದೇ ಅಹಿತಕರ ಘಟನೆಗಳಿಲ್ಲದೆ ಕಾರ್ಯಕ್ರಮ ನಡೆಯಿತು.

6.30 ಎಕರೆ ಸರಕಾರಿ ಭೂಮಿಯಲ್ಲಿ “ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ” ಹೆಸರಿನಲ್ಲಿ ಕಂಬಳ ಆಯೋಜಿಸಲು ನಿರ್ಧರಿಸಲಾಗಿದ್ದು, ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷರಾಗಿದ್ದಾರೆ. ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

 ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಶಂಕುಸ್ಥಾಪನೆ ದಿನಾಂಕ ಕುರಿತು ಆಕ್ಷೇಪ ವ್ಯಕ್ತಪಡಿಸಿ, ಮಾ.4ರಂದು ಕಾರ್ಯಕ್ರಮ ನಡೆಯಲಿದೆ ಎಂದು ಪೋಸ್ಟರ್ ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಂಟಾದ ಗೊಂದಲದಿಂದ ಜಿಲ್ಲಾಡಳಿತ ಕಾರ್ಯಕ್ರಮ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಆದರೆ ಶನಿವಾರ ನಿಗದಿಯಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮದ ಪೋಸ್ಟರ್ ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನಾವು ಪಕ್ಷಾತೀತವಾಗಿ ಕಂಬಳವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಿದ್ದೇವೆ. ಮುಹೂರ್ತ ಯಾರನ್ನೂ ಕಾಯುವುದಿಲ್ಲ. ಸಂಘರ್ಷ ಬೇಡ, ರಾಜಕೀಯ ಬೇಡ ಎಂದು ನಿಶ್ಚಯಿಸಿದ್ದೇವೆ. ಆದರೆ ಅನಾವಶ್ಯಕವಾಗಿ ರಾಜಕೀಯ ಮಾಡಲಾಗುತ್ತಿದೆ” ಎಂದು ಆರೋಪಿಸಿದರು. ಈಗಾಗಲೇ ಸುಮಾರು ₹60 ಲಕ್ಷ ವೆಚ್ಚ ಮಾಡಲಾಗಿದೆ. ಒಟ್ಟು 2.50 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಇದು ಕ್ಷೇತ್ರದ ಜನತೆಗೆ ಮಾಡುತ್ತಿರುವ ಹಬ್ಬ. ಆದರೆ ಇದಕ್ಕೆ ಅಡ್ಡಿಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಶಾಸಕ ಸುನೀಲ್ ಕುಮಾರ್ ಮಾತನಾಡಿ, ಜನರ ಒತ್ತಾಯದ ಮೇರೆಗೆ ಕಂಬಳ ಮಾಡಲು ಮುಂದಾಗಿದ್ದೇವೆ. ಮಾ.4ರಂದು ಮತ್ತೊಂದು ಗುದ್ದಲಿ ಪೂಜೆಗೆ ದಿನಾಂಕ ನಿಗದಿಪಡಿಸುವುದು ಸರಿಯಲ್ಲ. ಮೊದಲು ಮಾಡುವುದೇ ಅಧಿಕೃತ. ಅಡ್ಡಿಪಡಿಸುವವರು ಮೂರು ವರ್ಷದಲ್ಲಿ ಸರ್ಕಾರ ಎಷ್ಟು ಅನುದಾನ ನೀಡಿದೆ ಎಂಬುದನ್ನು ಹೇಳಲಿ ಎಂದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, “ಕಂಬಳದಂತಹ ಒಳ್ಳೆಯ ಕಾರ್ಯಕ್ಕೆ ನಿಷೇಧಾಜ್ಞೆ ಹೇರಿರುವುದು ಇದೇ ಮೊದಲ ಬಾರಿ. ಇದು ನೋವಿನ ಸಂಗತಿ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಗೊಂದಲ ಮೂಡಿಸಬಾರದು ಎಂದರು.

ರಾಜ್ಯ ಕಂಬಳ ಆಸೋಸಿಯೇಶನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಇಂದು ಕಂಬಳ ಜನಪ್ರಿಯತೆ ಹೆಚ್ಚುತ್ತಿದೆ. ಕಂಬಳದಲ್ಲಿ ರಾಜಕೀಯ ಮಾಡುವುದು ಶೋಭೆಯಲ್ಲ. ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಯಬೇಕು” ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಶಾಸಕರಾದ ಯಶ್ ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ಸೇರಿದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಮಂದಿ ಶಾಸಕರು ಮತ್ತು ಒಬ್ಬ ಸಂಸದ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles