ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೆಪ್ಟೆಂಬರ್ 14ರಂದು ಅಂದರೆ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ನಡೆಯಲಿದ್ದು, 15 ರಂದು ಕೃಷ್ಣ ಲೀಲೋತ್ಸವಕ್ಕೆ ವಿಟ್ಲಪಿಂಡಿ ನಡೆಯಲಿದೆ. ಹೀಗಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಭ್ರಮ ಮನೆ ಮಾಡಿದ್ದು, ಬಹುತೇಕ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ.

ಅಷ್ಟಮಿ ಮುಖ್ಯ ಅಕರ್ಷಣೆಗಳಲ್ಲಿ ಒಂದಾದ ಮೊಸರು ಕುಡಿಕೆಗೆ ಈಗಾಗಲೇ ರಥಬೀದಿಯ ಸುತ್ತಲೂ 13 ಮರದ ತ್ರಿಕೋನಾಕೃತಿಯ ಗುರ್ಜಿಗಳ ನಿರ್ಮಾಣ ಪ್ರಕ್ರಿಯೆ ಮುಗಿದಿದೆ. ಇನ್ನು ಅಷ್ಟಮಿಯ ವಿಶೇಷ ಎಂದರೆ ಅದು ಅಷ್ಟಮಿಯ ಉಂಡೆ ಚಕ್ಕುಲಿಗಳು, ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಉಂಡೆ ಚಕ್ಕುಲಿಗಳು ಬಾಣಸಿಗರ ಕೈಯಿಂದ ತಯಾರಾಗಿದ್ದು, ಅಷ್ಟಮಿ ದಿನ ಬರುವ ಲಕ್ಷಾಂತರ ಭಕ್ತರಿಗೆ ಅನ್ನಸಂತರ್ಪಣೆಯ ಸಂದರ್ಭ ಪ್ರಸಾದದ ರೂಪದಲ್ಲಿ ವಿತರಣೆಯಾಗಲಿದೆ.

ಸೆಪ್ಟೆಂಬರ್ 14ರಂದು ಮುಂಜಾನೆ 9.30ರಿಂದ ರಾಜಾಂಗಣ, ಮಧ್ವಮಂಟಪ, ಅನ್ನಬ್ರಹ್ಮ ಮೊದಲಾದಕಡೆಗಳಲ್ಲಿ ವಿವಿಧ ವಯೋಮಿತಿಯ ಮಕ್ಕಳ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ 5ಕ್ಕೆ ರಾಜಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ನಡೆಯಲಿದೆ.

ಸಂಜೆ 6ಕ್ಕೆ ಕೃಷ್ಣಾವತಾರ ಉಪನ್ಯಾಸ, 7ಕ್ಕೆ ಶ್ರೀಕೃಷ್ಣ ಪುತ್ರ ವಿವಾಹೋತ್ಸವ ಯಕ್ಷಗಾನ, ರಾತ್ರಿ 11 ಕ್ಕೆ ಪರ್ಯಾಯ ಶ್ರೀಪಾದರಿಂದ ವಿಶೇಷ ಪೂಜೆ, 12.11ಕ್ಕೆ ಶ್ರೀಕೃಷ್ಣನಿಗೆ ಶ್ರೀಪಾದರಿಂದ, ಬಳಿಕ ಭಕ್ತರಿಂದ ಅರ್ಘ್ಯ ಪ್ರದಾನ ನೆರವೇರಲಿದೆ. 15ರಂದು ಅಪರಾಹ್ನ 3 ಗಂಟೆಗೆ ಶ್ರೀಕೃಷ್ಣ ಲೀಲೋತ್ಸವ ಆರಂಭವಾಗಲಿದೆ.
