Tuesday, July 29, 2025

spot_img

ನಾಗ ಭೌತಿಕವಾಗಿಯೂ ಪ್ರಕೃತಿಯ ನಿಯಂತ್ರಕ ಶಕ್ತಿ…..

ಸರ್ಪ ಜಾತಿಗಳಲ್ಲೇ ನಾಗ ವಿಶೇಷವಾಗಿ ಆರಾಧನೆಗೊಳ್ಳುವ ಉರಗ. ನೀರು, ಭೂಮಿ, ಸಮೃದ್ಧಿ,ಸಂತಾನಗಳಿಗೂ ನಾಗನಿಗೂ ಅವಿನಾಭಾವ ಸಂಬಂಧ. ಅದಕ್ಕಾಗಿ ನಾಗಾರಾಧನೆ ಬಹಳ ವಿಶೇಷ. ನಾಗ ಭೌತಿಕವಾಗಿಯೂ ಪ್ರಕೃತಿಯ ನಿಯಂತ್ರಕ ಶಕ್ತಿ. ಹಾಗಾಗಿ ಪ್ರಕೃತಿಯ ಶಕ್ತಿಯನ್ನು ನಮ್ಮ ಸಿರಿವಂತಿಕೆಯನ್ನು ಪ್ರದರ್ಶನ ಮಾಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಿಮೆಂಟಿನ ಕಟ್ಟೆಗಳನ್ನು ನಿರ್ಮಿಸದೇ ಪ್ರಕೃತಿಯ ಮಡಿಲಲ್ಲೇ ನಿರ್ದಿಷ್ಟ ಮರಗಳನ್ನು ನೆಟ್ಟು, ಬನಗಳ ಜೀರ್ಣೋದ್ಧಾರ ಮಾಡುವುದು ಉತ್ತಮ. ಆಗ ನೀರು, ಬೆಳೆ, ಸಮೃದ್ಧಿ ಸಿದ್ಧಿಸಬಹುದು. ಇನ್ನು ನಾಗ ನಡೆ ಮತ್ತು ನಾಗ ಬೀದಿಗಳ ಬಗ್ಗೆ ಕೇಳುತ್ತೇವೆ. ಪ್ರತಿಯೊಂದು ಜೀವಿಯೂ ತನ್ನ ಬದುಕಿಗಾಗಿ ನಿಶ್ಚಿತವಾದ ಪ್ರದೇಶವನ್ನು ಗೊತ್ತು ಮಾಡಿಕೊಂಡಿರುತ್ತದೆ. ಆ ವ್ಯಾಪ್ತಿಯಲ್ಲಿ ಅದೇ ಜಾತಿಯ ಇನ್ನೊಂದು ಜೀವಿ ಅಧಿಪತ್ಯ ಸ್ಥಾಪಿಸಲು ಇವು ಬಿಡುವುದಿಲ್ಲ. ನಾಗರಹಾವು ತನ್ನದೇ ಆದ ವ್ಯಾಪ್ತಿ, ನಿತ್ಯ ಸಂಚರಿಸುವ ಹಾದಿಗಳನ್ನು ಹೊಂದಿರುತ್ತದೆ. ಸ್ಥೂಲವಾಗಿ ಇದನ್ನು ನಾಗನೆಡೆ ಎನ್ನಬಹುದು. ನಾಗನನ್ನು ಭೂಮಿಯ ಆಧಾರಶಕ್ತಿ, ಮಹಾಶೇಷ,ಅನಂತ, ಮೂಲಪ್ರಕೃತಿ ಇತ್ಯಾದಿ ತಾತ್ವಿಕವಾಗಿ ವಿಭಿನ್ನ ಸ್ತರಗಳಲ್ಲಿ ಭಾವಿಸಿದರೆ ಬೇರೆಯೇ ಅರ್ಥ ತೆರೆದುಕೊಳ್ಳುತ್ತದೆ. ಹಾಗಾಗಿ ನಾಗನನ್ನು ಎಲ್ಲಿ ಜೀವಿಯಾಗಿ ಮತ್ತು ಎಲ್ಲಿ ತತ್ವವಾಗಿ ಹೇಳಿದ್ದಾರೆ ಎಂದು ನಾವು ತಿಳಿಯುವುದು ಬಹಳ ಮುಖ್ಯ. ಪ್ರಕೃತಿಯ ಅತೀ ಮುಖ್ಯ ಕೊಂಡಿಗಳಲ್ಲಿ ನಾಗವೂ ಒಂದು. ಹಾಗಾಗಿ ಕಾಳಜಿ ಮುಖ್ಯವಾಗುತ್ತದೆ. ದೈವ ಮತ್ತು ನಾಗನಿಗೆ ಪರಶುರಾಮ ಸೃಷ್ಟಿಯಲ್ಲಿ ಅವಿನಾಭಾವ ಸಂಬಂಧವಿದೆ. ಇಲ್ಲಿ ನಾಗ ಕೇವಲ ಹಾವಲ್ಲ . ನಮ್ಮನ್ನು ಕಾಪಾಡುವ ಶಕ್ತಿಯಾಗಿ, ಪ್ರಕೃತಿಯ ಒಟ್ಟು ಪ್ರತಿನಿಧಿಯಾಗಿ ಈ ತತ್ವ ಇದೆ. ಈ ಶಕ್ತಿ ಭೂಮಿಯ ನೀರಿನ ಲಭ್ಯತೆಗೆ,ಸಮೃದ್ಧಿಗೆ, ಸಂತಾನಕ್ಕೆ, ಆರೋಗ್ಯಕ್ಕೆ ಕಾರಣವಾದುದು. ಅಂದರೆ ಭೂಮಿ, ಬದುಕು ಮತ್ತು ಸಂತಾನಗಳ ಹಿಂದಿರುವ ಬಲ. ವಿಶಾಲ ಅರ್ಥದಲ್ಲಿ ಲೌಕಿಕವಾದ ಎಲ್ಲಕ್ಕೂ ಆಧಾರಭೂತ ಶಕ್ತಿ ಇದು. ಇದನ್ನೇ ನಾವು ಆರಾಧಿಸುವುದು. ಹಾಲು ಎಂದರೆ ಅಮೃತ, ಹಾಲು ಕೊಡುವುದು ಎಂದರೆ ಪ್ರಸನ್ನಗೊಳಿಸುವುದು. ನಮ್ಮ ಪರಂಪರೆಯನ್ನು ಗಮನಿಸುವಾಗ ಹಾಲು ಮತ್ತು ಎಳನೀರು ತಂಪು ಮಾಡಲು ಮತ್ತು ಪ್ರಸನ್ನಗೊಳಿಸಲು ಸಾಂಕೇತಿಕ ಕ್ರಿಯೆಗಳೇ ಹೊರತು ವಾಸ್ತವವಾಗಿ ಒಂದು ಉರಗಕ್ಕೆ ಹಾಲಿನ ಅವಶ್ಯಕತೆ ಇಲ್ಲ. ಕಟ್ಟಡಗಳಿಗೆ ಶಿಲಾನ್ಯಾಸ ಮಾಡುವಾಗ ಕೂಡ ಭೂಮಿಗೆ ಹಾಲೆರೆಯುವ ತತ್ವವನ್ನು ಗಮನಿಸಬಹುದು.
ಮಹಾಭಾರತದ ನಂತರ, ಪಾಂಡವರ ಪುತ್ರ ಜನಮೇಜಯನು ತಂದೆಯ ಮರಣಕ್ಕೆ ಕಾರಣರಾದ ತಕ್ಷಕ ನಾಗನಿಗೆ ಪ್ರತೀಕಾರ ತೀರಿಸಲು ಸರ್ಪಯಾಗನೆಂಬ ಮಹಾಯಜ್ಞವನ್ನು ಮಾಡುತ್ತಾನೆ. ಆದರೆ ಆಸ್ತಿಕ ಮುನಿಯ ಮಾತಿನಿಂದ ಯಾಗವನ್ನು ನಿಲ್ಲಿಸುತ್ತಾನೆ. ಈ ದಿನವೇ ಸರ್ಪ ಜೀವರಕ್ಷಣೆಯ ದಿನವಾಯಿತು. ಆಗಿನಿಂದ ನಾಗರ ಪಂಚಮಿಯ ಆಚರಣೆ ಆರಂಭವಾಯಿತು ಎಂದು ಕಥೆಯಿದೆ.
ನಾಗರ ಪಂಚಮಿ ದಿನ ಭೂಮಿ ಮತ್ತು ಜಲತತ್ವಕ್ಕೆ ಸಂಬಂಧಿಸಿದ ದೇವತೆಗಳಾದ ನಾಗ ದೇವತೆಗಳನ್ನು ಪೂಜಿಸುವುದು. ಸರ್ಪಗಳನ್ನು ಧರ್ಮದರ್ಶಿಯಾಗಿ ಪರಿಗಣಿಸಿ, ಅವರಿಗೆ ಹಾಲು, ಹಣ್ಣು, ಅರಿಶಿನ, ಕುಂಕುಮವಿಟ್ಟು ಪೂಜೆ ಮಾಡಲಾಗುತ್ತದೆ
ಈ ಹಬ್ಬವು ಶ್ರಾವಣ ಮಾಸದಲ್ಲಿ ಬರುವುದರಿಂದ, ಇದು ಪವಿತ್ರತೆಯ ಮಾಸ ಮತ್ತು ಪವಿತ್ರ ಕೆಲಸಗಳಿಗೆ ಶ್ರೇಷ್ಠ ಕಾಲವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಪ್ರಕೃತಿಯೂ ಹೆಚ್ಚು ಶುದ್ಧವಾಗಿರುತ್ತದೆ.
ನಾಗರ ಪಂಚಮಿ ಮಾನವ ಮತ್ತು ಸರ್ಪ ಸಂಸ್ಕೃತಿಯ ನಡುವಿನ ಶಾಂತಿಗೆ ಪ್ರತೀಕ. ನಾವು ಪ್ರಕೃತಿಯನ್ನು ಗೌರವಿಸಿದಾಗ, ಪ್ರಕೃತಿಯ ರಕ್ಷಣೆಗೂ ಸಹಾಯಕವಾಗುತ್ತೇವೆ ಎಂಬುದನ್ನು ಸೂಚಿಸುತ್ತದೆ.
ಇನ್ನು ನಾವು ಸರ್ಪವನ್ನು ಶಕ್ತಿ, ಬುದ್ಧಿ, ಜಾಗೃತಿಯ ಸಂಕೇತವಾಗಿ ನೋಡುತ್ತೇವೆ.
ಸರ್ಪವು ಎಚ್ಚರವಾಗಿರುತ್ತದೆ.
ಸರ್ಪವು ವೇಗವಾಗಿ ಬದಲಾವಣೆಗೊಳಗಾಗಬಹುದು.
ಸರ್ಪವು ನೆಲದಿಂದ ಮೇಲಕ್ಕೆ ಏರುವ ಶಕ್ತಿ ಹೊಂದಿದೆ.
ಇದೇ ಕಾರಣದಿಂದ ಕುಂಡಲಿನಿಯನ್ನು ಸರ್ಪದ ರೂಪದಲ್ಲಿ ಕಲ್ಪಿಸಲಾಗಿದೆ.
ನಮ್ಮಲ್ಲಿ ದೇವತೆ ಇದ್ದಾರೆ ಅಂತ ನಂಬಿಕೆಯಿಂದ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಆದರೆ ನಮ್ಮ ದೇಹವೇ ದೇವಾಲಯ, ನಮ್ಮ ಅಂತರಾಳದಲ್ಲೇ ದೇವತ್ವ, ಇವೆಲ್ಲವನ್ನೂ ಅರಿವಾಗಿಸಲು ಕುಂಡಲಿನಿ ಶಕ್ತಿ ಸಹಾಯಕ.
ಈ ಶಕ್ತಿ ಜಾಗೃತವಾಗಲು ಧ್ಯಾನ, ಪ್ರಾಣಾಯಾಮ, ಜಪ, ಬ್ರಹ್ಮಚರ್ಯ, ನಿಷ್ಠೆ, ಗುರುಪಾದ ಸೇವೆ ಮುಖ್ಯ ಮಾರ್ಗಗಳು.
ನಮ್ಮೊಳಗಿನ ಶಕ್ತಿಯ ಅರಿವಾದಾಗ, ನಾವು ದೇವರನ್ನು ಬೇರೆಡೆ ಹುಡುಕುವ ಅವಶ್ಯಕತೆಯೇ ಇರುವುದಿಲ್ಲ.
ಪಂಚಮಿ ಅಂದರೆ ಸರ್ಪದ ಪೂಜೆಯಲ್ಲದೆ, ಇದು ಪ್ರಕೃತಿಯ ಶಕ್ತಿಗಳ, ಕೃಷಿ ಸಂಸ್ಕೃತಿಯ, ಪೌರಾಣಿಕ ಕಥೆಗಳ, ಧರ್ಮ ಸಂಪ್ರದಾಯಗಳ ಮೇಳವಾಗಿದೆ
-Dharmasindhu Spiritual Life

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles