ಉಡುಪಿ : ವಿಶೇಷ ಚೇತನರು ಸಮಾಜದಲ್ಲಿ ಆತ್ಮವಿಶ್ವಾಸದಿಂದ ಜೀವನ ನಡೆಸಲು ಸರಕಾರ ಹಾಗೂ ಸಂಘ- ಸಂಸ್ಥೆಗಳು ಅನೇಕ ರೀತಿಯಲ್ಲಿ ಸಹಾಯ-ಸೌಲಭ್ಯಗಳನ್ನು ನೀಡುತ್ತಿದೆ. ವಿಶೇಷ ಚೇತನರು ತಮ್ಮ ನ್ಯೂನ್ಯತೆಗಳನ್ನು ಬದಿಗೊತ್ತಿ ಈ ಎಲ್ಲಾ ಸೌಲಭ್ಯಗಳನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸಿಕೊಂಡು, ಸಮಾಜದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅವರು ನಗರದ ಹೋಟೆಲ್ ಚಿತಾರ ಇಲ್ಲಿ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ನವ ಜೀವನ – ವಿಶೇಷಚೇತನರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು. ವಿಶೇಷ ಚೇತನರು ದುರ್ಬಲರಲ್ಲ ಎಂಬ ಭಾವನೆ ಅವರಲ್ಲಿ ಮೂಡಿಸಲು ಸರಕಾರ ಹಲವು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕೆಲವು ಸಂಸ್ಥೆಗಳು ಅವರಿಗೆ ಅಗತ್ಯವಿರುವ ಸಾಧನ ಸಲಕರಣೆಯನ್ನು ಸಹ ನೀಡುತ್ತಿದೆ. ಇವೆಲ್ಲವುಗಳ ಸದುಪಯೋಗವನ್ನು ವಿಶೇಷಚೇತನರು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಮಣಿಪಾಲ್ ಟೆಕ್ನಾಲಜೀಸ್ ಸಂಸ್ಥೆಯವರು ಶಿಕ್ಷಣ, ಆರೋಗ್ಯ ಸೇರಿದಂತೆ ಮತ್ತಿತರ ಅವಶ್ಯಕತೆಗಳನ್ನು ಪೂರೈಸಲು ತಮ್ಮ ಸಿ.ಎಸ್.ಆರ್ ನಿಧಿಯನ್ನು ಬಳಸುತ್ತಿದ್ದು, ಇಂದು ವಿಶೇಷ ಚೇತನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಬ್ಯಾಟರಿ ಚಾಲಿತ ಗಾಲಿಕುರ್ಚಿಗಳನ್ನು ಹಾಗೂ ಶ್ರವಣ ಯಂತ್ರಗಳನ್ನು ನೀಡಲು ಬಳಸುತ್ತಿದ್ದಾರೆ. ಸಂಸ್ಥೆಯು ಇಂತಹ ಸಮಾಜಮುಖಿ ಕೆಲಸಗಳನ್ನು ಹೆಚ್ಚು ಹೆಚ್ಚು ಮಾಡುವಂತಾಗಲಿ ಹಾಗೂ ಸೌಕರ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಲಿ ಎಂದರು.

ಸೌಲಭ್ಯಗಳನ್ನು ಪಡೆದುಕೊಂಡ ಫಲಾನುಭವಿಗಳು ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು. ಉಪಕರಣಗಳನ್ನು ಜೋಪಾನವಾಗಿ ಇಟ್ಟುಕೊಂಡು ಸಣ್ಣ-ಪಟ್ಟ ದುರಸ್ಥಿಗಳಿದ್ದಲ್ಲಿ ಮೂಲೆಗುಂಪು ಮಾಡದೇ ಅದನ್ನು ಸರಿಪಡಿಸಿ ಮರು ಬಳಕೆ ಮಾಡಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್‌ನ ಜನರಲ್ ಮ್ಯಾನೆಜರ್ ಹೆಚ್.ಆರ್ & ಸಿ.ಎಸ್.ಆರ್ ರೊನಾಲ್ಡ್ ಡಿ ಸೋಜಾ ಉಪಸ್ಥಿತರಿದ್ದರು. ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಪ್ರಶಾಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಣಿಪಾಲ್ ಲಿಮಿಟೆಡ್ ವತಿಯಿಂದ ನೀಡಲಾದ ಹಿಯರಿಂಗ್ ಏಡ್ ಕಿಟ್ ಅನ್ನು 14 ಜನ ಫಲಾನುಭವಿಗಳಿಗೆ ವಿತರಿಸಲಾಯಿತು, ಏಳು ಜನ ಫಲಾನುಭವಿಗಳಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿಯನ್ನು ಹಸ್ತಾಂತರಿಸಲಾಯಿತು ಹಾಗೂ ಸಾಧನ ಸಲಕರಣೆಯನ್ನು ನೀಡಿದ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್‌ಗೆ ಕೃತಜ್ಞತಾ ಪತ್ರವನ್ನು ನೀಡಲಾಯಿತು. ಸ್ವಯಂ ಚಾಲಿತ ಬ್ಯಾಟರಿಯನ್ನು ಆಪರೇಟ್ ಮಾಡುವ ಕುರಿತು ವೀಡಿಯೋ ಮೂಲಕ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ಜಿಲ್ಲೆಯ ವೈದ್ಯಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಫಲಾನುಭವಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಆಲಂದೂರು ಮಂಜುನಾಥ ಎಸ್.ಗಾಣಿಗ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.