ಉಡುಪಿ : ಮಣಿಪಾಲದ ಸರಳಬೆಟ್ಟುವಿನ ಡಾ. ರಾಜಕುಮಾರ್ ಮಾರ್ಗದಲ್ಲಿ ನಮ್ ಟೀಮ್ ಮಣಿಪಾಲದ 23ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಕಾಂಗ್ರೆಸ್ನ ಹಿರಿಯ ಮುಖಂಡ ಜಯಶೆಟ್ಟಿ ಬನ್ನಂಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ತಮ್ಮ ವಾಸಿಸುವ ಬಾಡಿಗೆ ಮನೆಯ ಬಳಿ ಆಹಾರ ಅರಸಿ ಬರುವ ಬೀಡಾಡಿ ಗೋವುಗಳಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರತಿದಿನ ಆಹಾರ ನೀಡುತ್ತಿರುವ ಮಾನವೀಯ ಸೇವೆಯನ್ನು ಗುರುತಿಸಿ ಅಚ್ಯುತ ನಗರ ನಿವಾಸಿ, ಮಾಜಿ ತೀರ್ಥಹಳ್ಳಿ ಪುರಸಭಾ ಉಪಾಧ್ಯಕ್ಷರಾದ ಕೆ. ಆರ್. ಅಶೋಕ್ ಅವರನ್ನು ಸನ್ಮಾನಿಸಲಾಯಿತು.

ಮಣಿಪಾಲದ ಪ್ರಸಿದ್ಧ ಕಿಣಿ ಕ್ಯಾಂಟೀನ್ ಮಾಲಕರಾದ ದೀಪಕ್ ಕಿಣಿ ಹಾಗೂ ಮಣಿಪಾಲ ಬೇಕರಿಯ ಮಾಲಕರಾದ ಸಂತೋಷ್ ಶೆಟ್ಟಿ ಅವರ ಸಹಕಾರದಿಂದ ನೂರಾರು ವಿದ್ಯಾರ್ಥಿಗಳಿಗೆ ಉಪಹಾರ ಹಾಗೂ ಸಿಹಿ ತಿಂಡಿ ವ್ಯವಸ್ಥೆ ಮಾಡಲಾಯಿತು. ದಾನಿಗಳ ನೆರವಿನಿಂದ ಮಕ್ಕಳಿಗೆ ನೋಟ್ಬುಕ್ಗಳು ಮತ್ತು ಶಾಲಾ ಕಲಿಕೆಗೆ ಅಗತ್ಯವಿರುವ ಇತರ ಸಾಮಗ್ರಿಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ನಮ್ಮನ್ನಗಲಿದ ಖ್ಯಾತ ಹುಲಿ ವೇಷದಾರಿ ಉಡುಪಿಯ ಅಶೋಕ್ ರಾಜ್ ಕಾಡಬೆಟ್ಟು, ಸರಳಬೆಟ್ಟುವಿನಲ್ಲಿ ಬಾಲಮಿತ್ರ ಯಕ್ಷಗಾನ ತಂಡ ಸ್ಥಾಪಿಸಿದ ಕಮಲಾಕ್ಷ ಪ್ರಭು ಚೇರ್ಕಾಡಿ ಹಾಗೂ ಸಮಿತಿಯ ಪದಾಧಿಕಾರಿಗಳಾದ ಶ್ರೀಮತಿ ಪ್ರೇಮ ನಾಯ್ಕ್ ಮತ್ತು ಲಲಿತಾ ಕಾಮತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯಡ್ಕ ಸುಧೀರ್ ಶೆಟ್ಟಿ, ಜಯದೀಪ್ ನಾಯಕ್, ಪರ್ಕಳ ನಮ್ ಟೀಮ್ ಸಂಘಟಕ ಗಣೇಶ್ ರಾಜ್ ಸರಳಬೆಟ್ಟು, ಸಿಸ್ಟರ್ ಜ್ಯೋತಿ, ಗಣೇಶ್ ರಾಜ್, ರಾಜೇಶ್ ಪ್ರಭು ಪರ್ಕಳ, ಶ್ರೀಮತಿ ಸುಜಾತ ವಿ. ಪುತ್ರನ್, ರಾಜನ್ನ, ರಾಣಿ, ಮೇರಿ ಸುಬ್ರಾಯ ಕಾಮತ್, ಮಂಜುಳಾ ನಾಯ್ಕ್, ದಿವ್ಯ ನಾಯ್ಕ್, ದಿನೇಶ್ ಹಾವಂಜೆ, ಹರೀಶ್ ಪೂಜಾರಿ ಕೀಳಂಜೆ ಮೊದಲಾದವರು ಉಪಸ್ಥಿತರಿದ್ದರು.



