ಉಡುಪಿ: ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಉದ್ದೇಶಕ್ಕಾಗಿ ಸ್ಥಾಪನೆಯಾಗಿರುವ ರಾಷ್ಟ್ರೀಯ ಬ್ಯಾಂಕ್ ನಬಾರ್ಡ್ ಮೂಲಕ ವಿವಿಧ ಇಲಾಖೆಗಳ ಅಭಿವೃದ್ಧಿಯ ಕುರಿತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ರವರು ಉಡುಪಿ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹಾಗೂ ಗ್ರಾಮೀಣ ಉದ್ಯಮಗಳನ್ನು ಬಲಪಡಿಸಲು ನಬಾರ್ಡ್ ಆರ್ಥಿಕ ನೆರವನ್ನು ಸಾಲ ಸೌಲಭ್ಯ ರೂಪದಲ್ಲಿ ನೀಡುತ್ತಿದ್ದು, ಅದರ ಸಂಪೂರ್ಣ ಸದುಪಯೋಗವನ್ನು ಉಡುಪಿ ಜಿಲ್ಲೆ ಪಡೆಯಲು ಸಂಸದ ಕೋಟ ಸಲಹೆ ನೀಡಿದರು. ಗ್ರಾಮ ಮಟ್ಟದಲ್ಲಿ ಗ್ರಂಥಾಲಯಗಳ ಅಭಿವೃದ್ಧಿ, ಡಿಜಿಟಲ್ ಲೈಬ್ರೇರಿ, ಮಾಹಿತಿ ತಂತ್ರಜ್ಞಾನದ ಉನ್ನತೀಕರಣ, ಶುದ್ಧ ಕುಡಿಯುವ ನೀರಿನ ಘಟಕ, ಜಿಲ್ಲಾ, ಗ್ರಾಮೀಣ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ. ಕಿರುಸೇತುವೆ ಮತ್ತು ಕಿಂಡಿ ಅಣೆಕಟ್ಟುಗಳ ನಿರ್ಮಾಣ, ತ್ಯಾಜ್ಯ ಹಾಗೂ ನೈರ್ಮಲ್ಯ ನಿರ್ವಹಣೆಗಾಗಿ ನಬಾರ್ಡ್ ಸಾಲ ಸೌಲಭ್ಯದ ಮೂಲಕ ಆರ್ಥಿಕ ನೆರವನ್ನು ನೀಡುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಶಾಲೆಗಳ ಅಭಿವೃದ್ಧಿಗೋಸ್ಕರ, ಅಂಗನವಾಡಿಗಳ ಕಟ್ಟಡ ದುರಸ್ಥಿ ಮತ್ತು ನೂತನ ಕಟ್ಟಡಗಳ ನಿರ್ಮಾಣ, ಮೀನುಗಾರಿಕಾ ಇಲಾಖೆಯ ಬಂದರು ಮತ್ತು ಜಟ್ಟಿ ನಿರ್ಮಾಣ, ಕೃಷಿ ಯಂತ್ರೋಪಕರಣ, ಗೋಶಾಲೆಗಳ ಅಭಿವೃದ್ಧಿ, ಆರೋಗ್ಯ ಇಲಾಖೆಯ ಆಸ್ಪತ್ರೆಗಳ ಆಧುನೀಕರಣಗೊಳಿಸುವುದು, ತೋಟಗಾರಿಕೆ ಇಲಾಖೆಯ ಕೋಲ್ಡ್ ಸ್ಟೋರೇಜ್ ಇತ್ಯಾದಿಗಳ ಕುರಿತು ಹೊಸ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸಂಸದ ಸಲಹೆ ನೀಡಿದರು.

ಸಭೆಯಲ್ಲಿ ನಬಾರ್ಡ್ನ ವಿಭಾಗೀಯ ಜಿಲ್ಲಾ ವ್ಯವಸ್ಥಾಪಕರಾದ ಸಂಗೀತಾ ರವರು ಸುಮಾರು 20 ನಿಮಿಷಗಳ ಕಾಲ ನಬಾರ್ಡ್ ಯೋಜನೆಗಳ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾಹಿತಿ ಒದಗಿಸಿದರು. ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಬಾರ್ಡ್ ಯೋಜನೆಗಳಡಿ ಇಲಾಖೆವಾರು ವಿಸ್ತೃತ ವಿನೂತನ ಪ್ರಸ್ತಾವನೆಗಳನ್ನು ತಯಾರಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿಲ್ಲಾ ಪಂಚಾಯತ್ ಉಡುಪಿ ರವರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಲು ಸಭೆಯಲ್ಲಿ ಸಂಸದರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.



