ಚಿಕ್ಕಮಗಳೂರು : ನಕ್ಸಲ್ ಚಳವಳಿಯಲ್ಲಿ ಸಕ್ರಿಯನಾಗಿದ್ದ ಕೋಟೆಹೊಂಡ ರವೀಂದ್ರ ಮುಖ್ಯವಾಹಿನಿ ಸೇರಿದ್ದಾರೆ. 18 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿ ಭೂಗತರಾಗಿದ್ದ ರವೀಂದ್ರ ಅಲಿಯಾಸ್ ಕೋಟೆಹೊಂಡ ರವೀಂದ್ರ (44) ಶನಿವಾರ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ. ನಕ್ಸಲ್ ಶರಣಾಗತಿ, ಪುನರ್ವಸತಿ ರಾಜ್ಯ ಸಮಿತಿ ಸದಸ್ಯ ಕೆ.ಪಿ.ಶ್ರೀಪಾಲ್ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರಾದ ವಿ.ಎಸ್.ಶ್ರೀಧರ್, ನಗರಗೆರೆ ರಮೇಶ್, ಕೆ.ಎಲ್.ಅಶೋಕ್ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ 1:30ರ ಸಮಯದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರವೀಂದ್ರ, ನಕ್ಸಲ್ ಶರಣಾಗತಿ ಸಮಿತಿ ಜಿಲ್ಲಾಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಹಾಗೂ ಜಿಲ್ಲಾ ಸಮಿತಿ ಸಂಚಾಲಕ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಜಿಲ್ಲಾ ಸಮಿತಿ ಸದಸ್ಯೆ ಹಾಗೂ ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತರಾದರು.
ಶರಣಾಗತಿ ಪ್ರಕ್ರಿಯೆ ವೇಳೆ ಮಾತನಾಡಿದ ರವೀಂದ್ರ, ನಾನು ಮಲೆನಾಡಿನ ಜನರ ಸಂಕಷ್ಟ, ಜನವಿರೋಧಿ ಅರಣ್ಯ ಯೋಜನೆಗಳು, ಭ್ರಷ್ಟ ಆಡಳಿತ ವ್ಯವಸ್ಥೆಯಿಂದ ನೊಂದು ನಕ್ಸಲ್ ಚಳವಳಿ ಸೇರಿಕೊಂಡಿದ್ದೆ. ಚಳವಳಿಯಲ್ಲಿ ಸಕ್ರಿಯನಾಗಿದ್ದ ವೇಳೆ ಕಾಡಿನಲ್ಲಿದ್ದೆ. ಸದ್ಯ ಸ್ವಇಚ್ಛೆಯಿಂದ ಸರಕಾರದ ಮುಂದೆ ಶರಣಾಗಿದ್ದೇನೆಯೇ ಹೊರತು ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ ಎಂದರು. ಶರಣಾಗತಿ ಪ್ರಕ್ರಿಯೆ ಬಳಿಕ ರವೀಂದ್ರ ಅವರನ್ನು ಪೊಲೀಸರು ವಶಕ್ಕೆ ಪಡೆದು ಆರೋಗ್ಯ ತಪಾಸಣೆಗೊಳಪಡಿಸಿದರು. ನಂತರ ಶೃಂಗೇರಿ ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಸದ್ಯ ಮುಖ್ಯವಾಹಿನಿಗೆ ಮರಳಿರುವ ರವೀಂದ್ರ ಮೂಲತಃ ಶೃಂಗೇರಿ ತಾಲೂಕಿನ ಕೋಟೆಹೊಂಡ ಹುಲುಗಾರುಬೈಲು ಗ್ರಾಮದವರಾಗಿದ್ದು, 2007ರಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ರವೀಂದ್ರ ಅವರು ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಭೂಗತನಾಗಿದ್ದುಕೊಂಡು ನಕ್ಸಲ್ ಚಳವಳಿಯಲ್ಲಿ ಭಾಗವಹಿಸಿದ್ದರು.