ಉಡುಪಿ:ಉಡುಪಿಯಲ್ಲಿ ಹುಲಿ ಉಗುರು ಎಂದು ನಂಬಿಸಿ ನಕಲಿ ಹುಲಿ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದ ವಂಚಕನನ್ನು ವಶಕ್ಕೆ ಪಡೆಯುವಲ್ಲಿ ಉಡುಪಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸನ್ನ್ಯಾಸಿ ವೇಷದಲ್ಲಿದ್ದ ವಂಚಕನು ಹುಲಿ ಉಗುರು ಅಸಲಿ ಎಂದು ನಂಬಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ, ಅನುಮಾನಗೊಂಡ ಸಾರ್ವಜನಿಕರು ನಾಗರಿಕ ಸಮಿತಿಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಕಾರ್ಯಕರ್ತರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ವಿಷಯ ಮುಟ್ಟಿಸಿದರು.

ವಂಚಕ ಪಲಾಯನ ಮಾಡಲು ಯತ್ನಿಸಿದಾಗ, ನಗರ ಪೊಲೀಸ್ ಠಾಣೆಯ ಪೊಲೀಸರು ನಗರದ ಹಳೆ ಬಸ್ಸು ನಿಲ್ದಾಣ ಪ್ರದೇಶದಲ್ಲಿ ಆತನನ್ನು ವಶಕ್ಕೆ ಪಡೆದರು. ಬಳಿಕ ವಂಚಕನನ್ನು ಮುಂದಿನ ಕ್ರಮಕ್ಕಾಗಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಈ ಕಾರ್ಯಾಚರಣೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಸಹಕಾರ ನೀಡಿದರು.

ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ, ವಶಪಡಿಸಿಕೊಂಡ ವಸ್ತು ನಕಲಿಯೇ ಎಂಬುದರ ಬಗ್ಗೆ ತಾಂತ್ರಿಕ ಪರಿಶೀಲನೆ ನಡೆಸುತ್ತಿದೆ. ಈ ಕಾರ್ಯಾಚರಣೆಗೆ ಸಹಕರಿಸಿದ ಸಾರ್ವಜನಿಕರು ಮತ್ತು ನಾಗರಿಕ ಸಮಿತಿಯ ಕಾರ್ಯಕರ್ತರನ್ನು ಅಧಿಕಾರಿಗಳು ಅಭಿನಂದಿಸಿದ್ದಾರೆ.



