ಉಡುಪಿ: ನಕಲಿ ಬಂಗಾರ ನೀಡಿ ಮಹಿಳೆಯನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕಾವ್ಯ ಮತ್ತು ದಾವಣಗೆರೆ ಜಿಲ್ಲೆಯ ವೆಂಕಟೇಶ್ ಆರೋಪಿಗಳು.

ಜನವರಿ 13ರಂದು ಮಧ್ಯಾಹ್ನ 2:30ರ ಸುಮಾರಿಗೆ ಕಾಪು ತಾಲೂಕಿನ ನಡ್ಸಾಲು ಗ್ರಾಮದ ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ಬಸ್ಸಮ್ಮ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ಮಹಿಳೆ ಹಾಗೂ ಪುರುಷರು ಚಿನ್ನದಂತೆ ಕಾಣುವ ನಕಲಿ ಸರವನ್ನು ತೋರಿಸಿ, ಅದು ಆರು ಪವನು ತೂಕದ ಚಿನ್ನದ ಸರವೆಂದು ನಂಬಿಸಿದರು. ತುರ್ತು ಹಣದ ಅಗತ್ಯವಿದೆ ಎಂದು ಹೇಳಿ, ಆ ಸರವನ್ನು ನೀಡಿ ಬಸ್ಸಮ್ಮ ಅವರ ಬಳಿ ಇದ್ದ ಸುಮಾರು 2 ಪವನು ತೂಕದ ಬಂಗಾರದ ಒಡವೆಗಳು (ಅಂದಾಜು 1.50 ಲಕ್ಷ ರೂ.) ಹಾಗೂ 6 ಸಾವಿರ ರೂಪಾಯಿ ನಗದು ಪಡೆದು ಪರಾರಿಯಾಗಿದ್ದರು.

ನಂತರ ಬಸ್ಸಮ್ಮ ಅವರು ಸರವನ್ನು ಪರಿಶೀಲಿಸಲು ಚಿನ್ನದ ಅಂಗಡಿಗೆ ಹೋದಾಗ ಅದು ನಕಲಿ ಎಂದು ತಿಳಿದುಬಂದಿದ್ದು, ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಆರೋಪಿಗಳ ಬಗ್ಗೆ ಮಾಹಿತಿ ದೊರೆತಿದ್ದು, ಮಾರ್ಚ್ 23ರಂದು ಕಾವ್ಯಳನ್ನು ಬಂಧಿಸಲಾಗಿದೆ. ಆಕೆಯಿಂದ 75 ಸಾವಿರ ರೂಪಾಯಿ ಮೌಲ್ಯದ 7.610 ಗ್ರಾಂ ಚಿನ್ನಾಭರಣ ಹಾಗೂ 6 ಸಾವಿರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವೆಂಕಟೇಶ್ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.



