ಉಡುಪಿ : ಸೌಜನ್ಯ ಕೊಲೆ ನಡೆದು ಇಂದಿಗೆ 13 ವರ್ಷ ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದಿರುವುದು ವ್ಯವಸ್ಥೆಯ ದುರಂತವಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದ ನೂರಾರು ಅಸಹಜ ಸಾವುಗಳಿಗೂ ನ್ಯಾಯ ಸಿಕ್ಕಿಲ್ಲ ಆರೋಪಿಗಳ ಪತ್ತೆ ಆಗಿಲ್ಲ ಎಂದರೆ ಇದರ ಹಿಂದೆ ಧರ್ಮದ ರಾಜಕಾರಣ ಮಾಡುವ ಅಧರ್ಮಿಗಳು,ಹಣ, ಅಧಿಕಾರ, ತೋಳ್ಬಲ ಹೊಂದಿರುವ ಧರ್ಮೋಧ್ಯಮಿಗಳಿಂದ ನ್ಯಾಯ ಸಿಕ್ಕಿಲ್ಲವೇ ಎಂಬ ಸಂಶಯ ಮೂಡಿದೆ ಇಂತಹ ಅನ್ಯಾಯ ವಿರುದ್ಧ ನ್ಯಾಯಕ್ಕಾಗಿ ಜನಾಗ್ರಹ ಮೂಲಕ ಹೋರಾಟ ತೀವ್ರಗೊಳಿಸಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.

ಅವರು ಉಡುಪಿ ಹಳೇ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯು ರಾಜ್ಯದಾದ್ಯಂತ ಕರೆ ನೀಡಿರುವ ಸೌಜನ್ಯ ದಿನ, ಸೌಜನ್ಯ ನ್ಯಾಯಕ್ಕಾಗಿ ಮೊಂಬತ್ತಿ ಹಿಡಿದು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು, ಧರ್ಮಸ್ಥಳ ಸುತ್ತಮುತ್ತ ಬಡವರ, ದಲಿತರ ಭೂ ಕಬಳಿಕೆ ನಡೆದ ಪ್ರಕರಣಗಳಿಗೂ ಹಾಗೂ ಭೂಮಿ ಕಳೆದುಕೊಂಡ ಸಂತ್ರಸ್ಥರ ಕುಟುಂಬಗಳ ಪ್ರಮುಖರ ಕೊಲೆಗಳಿಗೂ ನ್ಯಾಯ ಸಿಗದಿರುವುದು ಬಂಡವಾಳಶಾಹಿ ಅಧಿಕಾರದ ಪರಮಾವಧಿಯಾಗಿದೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆಯನ್ನು ನಡೆಸುತ್ತಿರುವುದನ್ನು ಅಭಿನಂದಿಸಬೇಕು ಆದರೆ ಎಸ್ಐಟಿ ವಿರುದ್ಧ ಷಡ್ಯಂತ್ರ ಕೆಲವು ಸ್ಥಾಪಿತ ಹಿತಾಸಕ್ತಿಗಳು ಮಾಡುತ್ತಿದ್ದು ಎಸ್ಐಟಿಗೆ ರಾಜ್ಯ ಸರ್ಕಾರ ಬಲ ನೀಡಬೇಕು ಅಲ್ಲದೇ ಧರ್ಮಸ್ಥಳದಲ್ಲಿ ನಡೆದ ಎಲ್ಲಾ ಪ್ರಕರಣಗಳನ್ನು ಎಸ್ಐಟಿಗೆ ವಹಿಸಬೇಕು ಎಂದು ಆಗ್ರಹಿಸಿದರು.

ಈ ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಶಶಿಧರ ಗೊಲ್ಲ, ಜನವಾದಿ ಮಹಿಳಾ ಸಂಘಟನೆಯ ಸರೋಜ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ನಾಯಕ್, ದಯಾನಂದ ಕೋಟ್ಯಾನ್, ಸಯ್ಯದ್ , ರಮೇಶ್ ಉಡುಪಿ, ರಾಮ ಕಾರ್ಕಡ,ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು,ಬೀಡಿ ಸಂಘಟನೆಯ ಉಮೇಶ್ ಕುಂದರ್, ನಳಿನಿ ಊಪಸ್ಥಿತರಿದ್ದರು. ಕವಿರಾಜ್ ಎಸ್ ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
