ಉಡುಪಿ: ದ್ವೇಷ ಭಾಷಣದ ವಿರುದ್ಧ ಕಾನೂನು ಜಾರಿಗೂ ಮುನ್ನ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿ, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ದ್ವೇಷ ಭಾಷಣ ತಡೆಯುವ ಉದ್ದೇಶದಿಂದ ಕಾನೂನು ರೀತಿಯಲ್ಲಿ ಮಸೂದೆ ತರಲಾಗಿದೆ ಎಂದು ತಿಳಿಸಿದರು. ಭವಿಷ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೂ, ಈ ಕಾನೂನನ್ನು ನಮ್ಮ ವಿರುದ್ಧವೂ ಬಳಸಬಹುದು. ಆದರೆ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವುದೇ ದ್ವೇಷ ಭಾಷಣ ಮಸೂದೆಯ ಉದ್ದೇಶ. ಜನರು ಒಟ್ಟಿಗೆ ಬದುಕಬೇಕಾದರೆ ಜಾತಿ, ಸ್ಥಳ, ಭಾಷೆ ಹಾಗೂ ವ್ಯಕ್ತಿತ್ವಗಳನ್ನು ನಿಂದಿಸಬಾರದು. ಈ ಕಾರಣಕ್ಕೆ ಸಂವಿಧಾನದ ಆಶಯದಂತೆ ಮಸೂದೆ ತರಲಾಗಿದೆ ಎಂದು ಹೇಳಿದರು.

ಬಿಜೆಪಿಯವರು ಏನು ಬೇಕಾದರೂ ಹೇಳಬಹುದು. ಆದರೆ ದೇಶದ ಸಂವಿಧಾನಕ್ಕೆ ಧಕ್ಕೆ ಬರಬಾರದು ಎಂಬುದೇ ನಮ್ಮ ಉದ್ದೇಶ. ಕಾಂಗ್ರೆಸ್ ಪಕ್ಷದ ಯಾರಾದರೂ ದ್ವೇಷ ಭಾಷಣ ಮಾಡಿದರೆ ಅವರ ಮೇಲೂ ಕಾನೂನು ಜಾರಿಯಾಗುತ್ತದೆ ಎಂದು ಸ್ಪಷ್ಟಪಡಿಸಿದರು. ನೋಟಿಸ್ ನೀಡಿರುವ ವಿಚಾರ ನನಗೆ ನಿಖರವಾಗಿ ಗೊತ್ತಿಲ್ಲ. ವ್ಯಕ್ತಿಗಳ ಹಿನ್ನೆಲೆ ನೋಡಿ ಯಾವುದೇ ಅಪಾಯ ಉಂಟಾಗಬಾರದೆಂದು ನೋಟಿಸ್ ನೀಡಿರಬಹುದು ಎಂದು ಹೇಳಿದರು. ಉಡುಪಿ ಪರ್ಯಾಯ ವೇಳೆ ಜಿಲ್ಲಾಧಿಕಾರಿ ಭಗವದ್ವಜ ಹಾರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವೆ, ಉಡುಪಿಯ ಪರ್ಯಾಯವು ಶುದ್ಧ ಧಾರ್ಮಿಕ ಕಾರ್ಯಕ್ರಮವಾಗಿದೆ. ಉಡುಪಿ ಸಂಸ್ಕೃತಿ ಮತ್ತು ಧಾರ್ಮಿಕತೆಗೆ ಹೆಸರುವಾಸಿ. ಈ ವಿಚಾರವನ್ನು ಅಲ್ಲಿಯೇ ಬಿಟ್ಟುಬಿಡಬೇಕು. ಧಾರ್ಮಿಕ ಮನೋಭಾವನೆಗೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು. ಅಗತ್ಯ ಬಿದ್ದರೆ ಈ ಕುರಿತು ಚರ್ಚೆಗೆ ನಾನು ಸಿದ್ಧ ಎಂದು ಹೇಳಿದರು.

ಗಡಿಯಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಚಿವೆ, ಈ ವಿಷಯ ಕೇಳಿದಾಗ ನನ್ನ ಎದೆ ಜಲ್ ಎಂದಿತ್ತು. 400 ಕೋಟಿ ಎಂಬ ಮೊತ್ತವನ್ನು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಆದರೆ ನಮ್ಮ ಪೊಲೀಸರು ತಕ್ಷಣ ಚೇಸ್ ಮಾಡಿ ಆರೋಪಿಗಳನ್ನು ಹಿಡಿದಿದ್ದಾರೆ. ಪೊಲೀಸರಿಗೆ ಮೊದಲನೆಯದಾಗಿ ಅಭಿನಂದನೆಗಳು ಎಂದು ಹೇಳಿದರು. ಆ ಹಣ ಎಲ್ಲಿಂದ ಬಂತು, ಎಲ್ಲಿಗೆ ಹೋಗುತ್ತಿತ್ತು, ಯಾರಿಗೆ ಸಂಬಂಧಪಟ್ಟದ್ದು ಎಂಬುದು ತನಿಖೆಯಿಂದ ಹೊರಬರಲಿ ಎಂದು ಹೇಳಿದರು. ವಾರಾಹಿ ನೀರಾವರಿ ಯೋಜನೆ ಸಂಬಂಧ ಕಾಂಗ್ರೆಸ್ ಒಳಗಿನ ಕಚ್ಚಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವೆ, ಇದು ಜಿಲ್ಲೆಯ ಬಹುದಿನದ ಬೇಡಿಕೆ ಮತ್ತು ರೈತರ ಹಿತಕ್ಕಾಗಿ ರೂಪಿಸಿದ ಯೋಜನೆ. ತಾಂತ್ರಿಕ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಜಿಲ್ಲಾಡಳಿತಕ್ಕೆ ಸಂಪೂರ್ಣ ಮಾಹಿತಿ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಮಾಹಿತಿ ಇದೆ. ತಾಂತ್ರಿಕ ತಂಡದೊಂದಿಗೆ ಸಭೆ ನಡೆಸಿ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್ ಚಂದ್ರ ಶೆಟ್ಟಿ ಕುರಿತು ಮಾತನಾಡಲು ಸಚಿವೆ ನಿರಾಕರಿಸಿದರು. ಯೋಜನೆ ಇಷ್ಟು ವರ್ಷ ನೆನೆಗುದಿಗೆ ಬಿದ್ದಿರುವುದು ದುರ್ದೈವ. ನಮ್ಮ ಕಾಲಘಟ್ಟದಲ್ಲಿ ಖಂಡಿತವಾಗಿ ಯೋಜನೆ ಮುಗಿಸುತ್ತೇವೆ ಎಂದು ಭರವಸೆ ನೀಡಿದರು.

ಪರಶುರಾಮ ಥೀಂ ಪಾರ್ಕ್ ಕುರಿತು ಮಾಜಿ ಸಚಿವ ಸುನಿಲ್ ಕುಮಾರ್ ಆರೋಪಗಳಿಗೆ ಉತ್ತರಿಸಿದ ಸಚಿವೆ, ಕರಾವಳಿಯಲ್ಲಿ ಪರಶುರಾಮನನ್ನು ಆರಾಧಿಸಲಾಗುತ್ತದೆ. ಈ ವಿಚಾರದಲ್ಲಿ ರಾಜಕಾರಣ ಮಾಡುವ ಉದ್ದೇಶ ನಮಗಿಲ್ಲ. ಫೈಬರ್‌ನಲ್ಲೇ ಮೂರ್ತಿ ನಿರ್ಮಿಸಿ ಕಂಚಿನ ಮೂರ್ತಿ ಎಂದು ಜನರನ್ನು ನಂಬಿಸಿದ್ದು ಸುನಿಲ್ ಕುಮಾರ್ ಎಂದು ಆರೋಪಿಸಿದರು. ಜನರನ್ನು ದಿಕ್ಕು ತಪ್ಪಿಸಿ ರಾಜಕೀಯ ಮಾಡಿರುವುದು ಅವರೇ. ಕಾಂಗ್ರೆಸ್ ದೇವರ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಪರಶುರಾಮ ಮೂರ್ತಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.



