ಕುಂದಾಪುರ: ಕರಾವಳಿ ಎಂದರೆ ಅದು ದೈವ ದೇವರುಗಳ ಸಮಾಗಮ, ಇಲ್ಲಿ ವರ್ಷಂಪ್ರತಿ ದೇವರ ಜಾತ್ರೆಗಳು ನಡೆಯುವಂತೆ ದೈವಗಳಿಗೂ ಕೋಲ ನೇಮೋತ್ಸವಗಳು ಅತೀ ವಿಜಂಭ್ರಣೆಯಿಂದ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ಒಂದು ಕಡೆಯಲ್ಲಿ ದೇವರಿಗೆ ಉತ್ಸವ, ದೀಪೋತ್ಸವ ಕಾಣ ಸಿಕ್ಕರೆ ಇನ್ನೊಂದು ಕಡೆಯಲ್ಲಿ ದೈವಗಳ ನೇಮೋತ್ಸವ ಕೋಲ ಕಾಣ ಸಿಗುತ್ತದೆ. ಇಂತಹ ಆಚರಣೆಗಳನ್ನು ಕಾಲಾನುಕಾಲಕ್ಕೆ ತಲೆಮಾರಿ ನಿಂದ ತಲೆಮಾರಿಗೆ ವಂಶ ಪಾರಂಪರ್ಯವಾಗಿ ಹರಿದು ಬರುತ್ತದೆ ಎನ್ನುವ ಮಾತು ಇದೆ. ಇನ್ನು ಇಲ್ಲಿ ನಡೆಯುವ ದೈವಗಳ ಸೇವೆಗೆ ಬೇಕಾದ ಮರದ ಮೂರ್ತಿಗಳನ್ನು ತಯಾರಿಸುವ ಒಂದು ವಿಶೇಷ ವರ್ಗವೇ ಇದೆ. ದೇವರನ್ನು ಕಲ್ಲಿನಲ್ಲಿ ಕೆತ್ತಿ ಸೃಷ್ಟಿಸಿದಂತೆ ದೈವಗಳನ್ನು ಮರದಲ್ಲಿ ಕೆತ್ತಿ ಅದ್ಭುತ ಬಣ್ಣಗಾರಿಕೆಯ ಮೂಲಕ ಭಕ್ತರ ಮನಸ್ಸಿನಲ್ಲಿ ಭಕ್ತಿ ಭಾವ ಹರಿದಾಡುವಂತೆ ಮಾಡುವ ಕಲಾವಿದರು ನಮ್ಮಲ್ಲಿದ್ದಾರೆ ಇದು ಕರಾವಳಿ ಹೆಚ್ಚುಗಾರಿಕೆ ಎಂದರೆ ತಪ್ಪಾಗಲಾರದು. ನಾವು ಹೇಳಲು ಹೊರಟಿರುವುದು ಕೂಡ ಇಂತಹದೆ ಕಲೆಗಾರನ ಕುರಿತು, ತಂದೆಯ ಆಚಾನಕ್ ನಿಧನದ ಬಳಿಕ ತಂದೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಈ ಯುವ ಕಲಾವಿದ ಈಗ ಕರಾವಳಿ ದೈವ ಮೂರ್ತಿಯ ಕೆತ್ತನೆ ಲೋಕದ ಹೆಸರಾಂತ ಕಲಾವಿದನಾಗಿ ಬೆಳೆದು ನಿಂತಿದ್ದಾನೆ.

ಕಲೆ ಯಾರ ಸೊತ್ತು ಅಲ್ಲಾ ಅನ್ನೋ ಮಾತು ಸತ್ಯ, ಕೋಟೇಶ್ವರ ಅಂಕದಕಟ್ಟೆ ನಿವಾಸಿ ಪ್ರತೀಕ್ ಈ ಮಾತನ್ನು ಸತ್ಯವಾಗಿಸಿದ್ದಾರೆ. ಯಾಕೆಂದರೆ ತಂದೆ ಪ್ರದೀಪ್ ಗುಡಿಗಾರ್ ಅವರು ದೈವದ ಮೂರ್ತಿ ಕೆತ್ತನೆ, ಗಣಪತಿ ನಿರ್ಮಾಣದಲ್ಲಿ ಎತ್ತಿದ ಕೈ. ತಂದೆಯ ಕಲೆಯನ್ನು ತನ್ನದೇ ಸೊತ್ತು ಎನ್ನುವುದನ್ನು ಮನಗಂಡು ತಂದೆ ಕಾಯಕ ಮುಂದುವರಿಸಿರುವ ಪ್ರತೀಕ್ ಎಂಜಿನಿಯರಿಂಗ್ ಪದವೀಧರ. ಕೋವಿಡ್ ಸಂದರ್ಭ ತಂದೆ ಅಕಾಲಿಕ ನಿಧನದ ಬಳಿಕ ಕುಲ ಕಸುಬು ಮುಂದುವರಿಸಿರುವ ಪ್ರತೀಕ್ ಈಗ ಮರದ ದೈವದ ಮೂರ್ತಿ ಕೆತ್ತನೆಯಲ್ಲಿ ಸಾಧನೆ ಮಾಡಿದ್ದಾರೆ. ಕರಾವಳಿಯಲ್ಲಿ ದೈವಾರಾಧನೆಗೆ ಹೆಚ್ಚಿನ ಮಹತ್ವವಿದೆ, ಪ್ರತಿ ಕಿಮೀ ಒಳಗೆ ಹತ್ತಾರು ದೇವಸ್ಥಾನ, ದೈವಸ್ಥಾನಗಳನ್ನು ಇಲ್ಲಿ ನೋಡಬಹುದಾಗಿದೆ. ಮುಖ್ಯವಾಗಿ ಗರಡಿಗಲ್ಲಿ ಪಂಜುರ್ಲಿ, ಕೋಟಿ ಚೆನ್ನಯ್ಯ, ಯಕ್ಷಿ, ವೀರಭದ್ರ, ಚಿಕ್ಕು ಮತ್ತು ಪರಿವಾರ ದೈವಗಳ ಮರದ ಮೂರ್ತಿ ಇಟ್ಟು ಪ್ರತಿಷ್ಠಾಪಿಸಲಾಗುತ್ತದೆ. ಪ್ರತಿ ವರ್ಷವೂ ಕೂಡ ವಾರ್ಷಿಕ ಉತ್ಸವದ ಮೊದಲು ಮೂರ್ತಿಗಳನ್ನು ಅಂದಗೊಳಿಸುವ ಕಾರ್ಯ ನಡೆಯುತ್ತದೆ. ಇನ್ನು ಮೂರ್ತಿ ಹಾಳಾಗಿದ್ದರೆ ಮತ್ತೆ ಹೊಸ ಮೂರ್ತಿ ಮಾಡಿಸಲಾಗುತ್ತದೆ. ಹೀಗಾಗಿ ಕರಾವಳಿಯಲ್ಲಿ ದೈವದ ಮರದ ಮೂರ್ತಿ ಕೆತ್ತನೆ ಮಾಡುವವರಿಗೆ ಸದಾ ಕಾಲ ಬೇಡಿಕೆ ಇದೆ. ಹೀಗಾಗಿ ಪ್ರತೀಕ್ ಗುಡಿಗಾರ್ ತನ್ನ ತಂದೆ ವೃತ್ತಿಯನ್ನೆ ಸದ್ಯ ಮುಂದುವರಿಸಿದ್ದಾರೆ.

2021ರಿಂದ ಮೂರ್ತಿ ಕೆತ್ತನೆಯ ಕಾರ್ಯದಲ್ಲಿ ತೊಡಗಿರುವ ಪ್ರತೀಕ್ ಇಲ್ಲಿಯವರೆಗೆ 50ಕ್ಕೂ ಅಧಿಕ ಕ್ಷೇತ್ರಗಳಿಗೆ, 75ಕ್ಕೂ ಹೆಚ್ಚಿನ ಮರದ ಮೂರ್ತಿಗಳನ್ನು ಕೆತ್ತನೆ ಮಾಡಿಕೊಟ್ಟಿದ್ದಾರೆ. ಇದರ ಜೊತೆಗೆ ಪ್ರತಿ ವರ್ಷವು ಕೂಡ ಕ್ಷೇತ್ರದ ಮೂರ್ತಿಗಳ ಸ್ವಚ್ಛತಾ ಕಾರ್ಯವು ಕೂಡ ಪ್ರತೀಕ್ ಅವರಿಂದಲೇ ನಡೆಯುತ್ತಿದೆ. ವಾರ್ಷಿಕ ಉತ್ಸವದ ಸಂದರ್ಭ ವಿಗ್ರಹಗಳ ಬೇಡಿಕೆ ಹೆಚ್ಚಾಗಿರುವುದರಿಂದ ಜನವರಿಯಿಂದ ಮೇ ತಿಂಗಳಿನವರೆಗೂ ಪ್ರತೀಕ್ ಅವರಿಗೆ ಬಿಡುವಿಲ್ಲದಷ್ಟು ಕೆಲಸ. ಒಂದು ಹೊಸ ಮರದ ವಿಗ್ರಹ ಕೆತ್ತನೆಗೆ ಸುಮಾರು 10ರಿಂದ 15 ದಿನಗಳನ್ನು ತೆಗೆದುಕೊಳ್ಳುವ ಪ್ರತೀಕ್ ಅವರು ಈ ಭಾಗದಲ್ಲಿ ಸಿಗುವ ಹಲಸು, ಹೆಬ್ಬೆಲಸು ಮರಗಳನ್ನು ಮೂರ್ತಿ ಕೆತ್ತನೆಗೆ ಬಳಸುತ್ತಾರೆ. ಇನ್ನು ಬೇಡಿಕೆಗೆ ಅನುಗುಣವಾಗಿ ರಕ್ತ ಚಂದನ, ಚಂದನ ಮರಗಳಲ್ಲೂ ಕೂಡ ಮೂರ್ತಿಗಳನ್ನು ನಿರ್ಮಿಸಿಕೊಡುತ್ತಾರೆ. ಮೂರ್ತಿ ಮಾಡಿಸುವವರು ಮರದ ನಿರ್ಧರಿಸಿ ಮರ ತಂದು ಕೊಡುತ್ತಾರೆ, ಒಂದು ಮರದ ಮೂರ್ತಿ ಸುಮಾರು 20-25 ವರ್ಷ ಬಾಳಿಕೆ ಬರುತ್ತದೆ ಎನ್ನುತ್ತಾರೆ ಪ್ರತೀಕ್. ಇನ್ನು ಮರದ ಮೂರ್ತಿ ಕೆತ್ತನೆಗೆ ಒಂದೆ ಮರ ಬಳಸಲಾಗುತ್ತದೆ, ಕೈ ಮತ್ತು ನಾಲಗೆಗೆ ಮಾತ್ರ ಬೇರೆದ ಮರ ಬಳಸಲಾಗುತ್ತದೆ. ಮರದ ಮೂರ್ತಿ ನಿರ್ಮಾಣದಲ್ಲಿ ಯಾವುದೇ ಮೊಳೆ ಬಳಸುವ ಪದ್ಧತಿ ಇಲ್ಲ, ಜೊತೆಗೆ ಮೂರ್ತಿ ನಿರ್ಮಾಣದ ಬಳಿಕ ಮೊದಲು ಸಾಂಪ್ರದಾಯಿಕ ಬಣ್ಣ ಬಳಸಲಾಗುತ್ತಿತ್ತು, ಸದ್ಯ ಆಯಿಲ್ ಪೇಯಿಂಟ್ ಬಳಸಲಾಗುತ್ತದೆ.

ಇನ್ನು ದೈವಗಳ ಮೂರ್ತಿ ಕೆತ್ತನೆ ಎನ್ನುವುದು ಆಚರಣೆ ಭಾಗವಾಗಿರುವ ಹಿನ್ನಲೆಯಲ್ಲಿ ಮೂರ್ತಿ ಕೆತ್ತನೆಯ ಆರಂಭದಿಂದ ಹಿಡಿದು ಅದನ್ನು ಹಸ್ತಾಂತರಿಸುವರೆಗೂ ಧಾರ್ಮಿಕ ವಿಧಿ ವಿಧಾನ ಪಾಲಿಸಲಾಗುತ್ತದೆ. ಮಹೂರ್ತ ನೋಡಿ ಪೂಜೆಯಿಂದ ಆರಂಭಗೊಂಡ ಮೂರ್ತಿ ಕೆತ್ತನೆ ಕಾರ್ಯ ಪೂರ್ಣಗೊಂಡ ಬಳಿಕ ಕಣ್ಣು ಹೊರತುಪಡಿಸಿ ಉಳಿದ ಭಾಗಗಳಿಗೆ ಬಣ್ಣ ಬಳಿಯಲಾಗುತ್ತದೆ. ತಯಾರಾದ ಮೂರ್ತಿಯನ್ನು ಬಟ್ಟೆ ಸುತ್ತಿ ದೈವಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ, ಅಲ್ಲಿ ಬಿಟ್ಟು ಕೊಡುವ ಸಂಪ್ರದಾಯ ನಡೆದ ಬಳಿಕ, ಚಿನ್ನದ ಸೂಜಿಯಿಂದ ಮೂರ್ತಿಯ ಕಣ್ಣಿನ ಭಾಗದಲ್ಲಿ ಕಪ್ಪು ಬಣ್ಣ ಬಳಿಯಲಾಗುತ್ತದೆ. ಈ ಕ್ರಮಕ್ಕೆ ಮೂರ್ತಿಗೆ ದೃಷ್ಟಿಕೊಡುವ ಕೆಲಸ ಎನ್ನಲಾಗುತ್ತದೆ. ಈ ವೇಳೆ ಮೂರ್ತಿಯ ನೇರ ದೃಷ್ಟಿ ಬೀಳುವಂತಿಲ್ಲ, ಹಾಗಾಗು ಕಾಷ್ಠ ಶಿಲ್ಪಿ ಪಕ್ಕದಲ್ಲಿ ನಿಂತು ದೃಷ್ಟಿ ಕೊಡಲಾಗುತ್ತದೆ, ನಂತರ ಅರ್ಚಕ ಪೂಜೆ ಮಾಡಿ, ಸಂಪ್ರದಾಯಗಳನ್ನು ಪೂರೈಸುತ್ತಾರೆ. ಕಾಷ್ಠ ಶಿಲ್ಪಿಗಳಿಗೆ ಕಾಣಿಕೆ ನೀಡಿ ಮೂರ್ತಿ ಸ್ವೀಕರಿಸಲಾಗುತ್ತದೆ.
ಒಟ್ಟಾರೆಯಾಗಿ ತಂದೆಯಿಂದ ಬಳುವಳಿಯಾಗಿ ಬಂದ ಈ ಕಲೆ ಪ್ರತೀಕ್ ಗುಡಿಗಾರ್ ಕೈಹಿಡಿದಿದೆ. ಛಲ ಮತ್ತು ಮಾಡುವ ಕೆಲಸದಲ್ಲಿ ಶೃದ್ಧೆ ಇದ್ದರೆ ಸಾಧನೆಯ ಶಿಖರ ಏರಬಹುದು ಎನ್ನುವುದನ್ನು ಕಾಷ್ಠಶಿಲ್ಪಿ ತೋರಿಸಿದ್ದಾರೆ, ಇದರ ಜೊತೆಗೆ ಕುಲಕಸುಬುಗಳಿಂದ ವಿಮುಖರಾಗುತ್ತಿರುವವರಿಗೆ ಪ್ರತೀಕ್ ಗುಡಿಗಾರ್ ಸದ್ಯ ಮಾದರಿಯಾಗಿದ್ದಾರೆ.

ನಮ್ಮ ತಲೆಮಾರಿನ ಮೂರು ಪೀಳಿಗೆಯಿಂದ ಬಂದ ಕಲೆ ಇದು, ನಾನು ಮುಂದುವರಿಸಿಕೊಂಡು ಬಂದಿದ್ದೇನೆ. ನನ್ನ ತಂದೆಯವರ ಕಾಲಕ್ಕೆ ಇದು ಕೊನೆಯಾಗುತ್ತಿತ್ತು, ಆದರೆ ನನಗೆ ಇದರ ಯೋಗ ಒದಗಿ ಬಂದಿದೆ. ಈ ಕಾರ್ಯದಲ್ಲಿ ಹಣ ಯಶಸ್ಸಿನ ಜೊತೆ ಆತ್ಮತೃಪ್ತಿ ಇದೆ. ಆಧುನಿಕತೆ ಭರಾಟೆ ಸಿಲುಕಿ ಕುಲ ಕಸುಬು ಬಿಟ್ಟವರು ಬಹಳಷ್ಟು ಮಂದಿ ಇದ್ದಾರೆ. ನಮ್ಮ ಪ್ರತಭೆಯನ್ನು ನಾವು ಮಾಡುವ ಕೆಲಸದಲ್ಲಿ ತೋರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ, ಅದಕ್ಕೆ ನಾನೆ ಉದಾಹರಣೆ.
ಪ್ರತೀಕ್ ಗುಡಿಗಾರ್ (ಇಂಜಿನಿಯರ್ ಕಾಷ್ಠ ಶಿಲ್ಪಿ)


