ಬಸ್ರೂರು : ಬಸ್ರೂರಿನ ಶ್ರೀ ದೇವಿ ದೇವಸ್ಥಾನದ ವಠಾರದಲ್ಲಿ ಜರಗಿದ, ಪೋರ್ಚುಗೀಸರ ವಿರುದ್ಧ ಛತ್ರಪತಿ ಶಿವಾಜಿ ಮಹಾರಾಜರು ಪ್ರಥಮ ನೌಕಾ ಯಾನ ಕೈಗೊಂಡು ಬಸ್ರೂರಿನಲ್ಲಿ ವಿಜಯ ಪತಾಕೆ ಹಾರಿಸಿದ ಸವಿನೆನಪಿಗೆ 360 ವರ್ಷಾಚರಣೆಯ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಅಭಿಮಾನಿ ಬಳಗ ಬಸ್ರೂರು ವತಿಯಿಂದ 12ನೇ ವರ್ಷದ ಬಸ್ರೂರು ಸ್ವಾತಂತ್ರ್ಯ ದಿನದ ಕಾರ್ಯಕ್ರಮವನ್ನು ಗೋವಾ ಮುಖ್ಯಮಂತ್ರಿ ಡಾ| ಪ್ರಮೋದ್ ಸಾವಂತ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ದೇಶ ದೇವರು ಧರ್ಮದ ವಿಷಯಗಳಲ್ಲಿ ಛತ್ರಪತಿ ಮಹಾರಾಜರು ನೀಡಿದ ಕೊಡುಗೆ ದೊಡ್ಡದು. ದೇವರ ಜೊತೆ ಧರ್ಮ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎನ್ನುವುದು ಶಿವಾಜಿ ಮಹಾರಾಜರ ತತ್ವವಾಗಿತ್ತು. ಗೋವಿನ ಪಾಲನೆ, ಧರ್ಮದ ಪಾಲನೆ, ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದವರು ಶಿವಾಜಿ. ಈ ರಾಜ್ಯ, ರಾಷ್ಟ್ರಕ್ಕಾಗಿ, ಜನರಿಗಾಗಿ ದಿಲ್ಲಿಯವರೆಗೆ ಹಿಂದೂ ಸಾಮ್ರಾಜ್ಯ ಸ್ಥಾಪನೆಯಾಗಬೇಕು. ಮಹಾರಾಷ್ಟ್ರದಿಂದ ಬಂದು ಗೋವಾ, ದಮನ್, ದಿಯುನಿಂದ ಡಚ್ಚರನ್ನು ಹಿಮ್ಮೆಟ್ಟಿಸಿದ್ದು, ಬಸ್ರೂರು ಎಂಬ ಈ ಪುಟ್ಟ ಗ್ರಾಮವನ್ನು ಪೋರ್ಚುಗೀಸರನ್ನು ಇಲ್ಲಿನ ಜನರ ಸಹಾಯದಿಂದ ಓಡಿಸಿದ್ದು ಶಿವಾಜಿ ಎಂದರು.

ರಾಷ್ಟ್ರೀಯವಾದಿ ರಂಗಕರ್ಮಿ ಅಡ್ಡಂಡ ಸಿ. ಕಾರ್ಯಪ್ಪ ಕೊಡಗು ದಿಕ್ಸೂಚಿ ಭಾಷಣ ಮಾಡಿದರು. ಭಾರತೀಯ ಸಂತ ಸಭಾದ ಸಂಘಟನ ಪ್ರಧಾನ ಕಾರ್ಯದರ್ಶಿ ಡಾ| ಸಂದೀಪ್‌ರಾಜ್ ಮಹದೇವ ರಾವ್ ಮಹಿಂದ್ ಪುಣೆ, ಛತ್ರಪತಿ ಶಿವಾಜಿ ಅಭಿಮಾನಿ ಬಳಗ ಬಸ್ರೂರಿನ ಕಾರ್ಯದರ್ಶಿ ರಾಕೇಶ್ ಕೆಳಾಮನೆ, ಪ್ರಮುಖರಾದ ವಾಸುದೇವ ಗಂಗೊಳ್ಳಿ, ಸುಧೀರ್ ಮೇರ್ಡಿ ಮತ್ತಿತರರು ಉಪಸ್ಥಿತರಿದ್ದರು.

ಛತ್ರಪತಿ ಶಿವಾಜಿ ಅಭಿಮಾನಿ ಬಳಗದ ಅಧ್ಯಕ್ಷ ಉಮೇಶ್ ಆಚಾರ್ಯ ಸ್ವಾಗತಿಸಿ, ಸಾರಿಕಾ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.