ಉಡುಪಿ : ಶೈಕ್ಷಣಿಕ ಸಾಧನೆಗೆ ಬಡತನ ಅಡ್ಡಿಯಾಗಲಾರದು ಎನ್ನುವುದಕ್ಕೆ ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಯೋರ್ವಳು ಸ್ಪಷ್ಟ ನಿದರ್ಶನವಾಗಿದ್ದಾಳೆ. ಜಿಲ್ಲೆಯ ಎಸ್ ಡಿ ಪಿ ಟಿ ಕಾಲೇಜಿನ ವಿದ್ಯಾರ್ಥಿನಿ ಮಾನ್ಯ ಎಸ್ ಪೂಜಾರಿ ವಿಶೇಷ ಸಾಧನೆ ಮಾಡಿದ ಸಾಧಕಿ ಎಂದರೆ ತಪ್ಪಾಗಲಾರದು.

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಟೆಂಪಲ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಾನ್ಯ ಎಸ್ ಪೂಜಾರಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 95.16 ಅಂಕ ಪಡೆದಿದ್ದಾಳೆ. ಚಿಕ್ಕವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿರುವ ಮಾನ್ಯ ತಾಯಿಯ ಆರೈಕೆಯಲ್ಲಿ ಬೆಳೆದ ಹುಡುಗಿ. ಗೇರುಬೀಜ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡಿ ಮಾನ್ಯ ಅವರ ತಾಯಿ ಇಬ್ಬರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ತಾಯಿಯ ಶ್ರಮಕ್ಕೆ ಬೆಲೆ ನೀಡಬೇಕು ಎನ್ನುವ ಉದ್ದೇಶಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ ಓದಿ ಸಾಧನೆ ಮಾಡಿರುವ ಮಾನ್ಯ, ಶಿಕ್ಷಣ ಉಳ್ಳವರ ಸ್ವಂತಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಮಗಳ ಉತ್ತಮ ಸಾಧನೆಯನ್ನ ಗಮನಿಸಿದ ತಾಯಿ ವಿನೋದ ಹರ್ಷ ವ್ಯಕ್ತಪಡಿಸಿದ್ದಾರೆ.
ಯಾವುದೇ ಟ್ಯೂಷನ್ ತರಗತಿಗಳಿಗೆ ಹೋಗದೆ ಕಾಲೇಜು ಪ್ರಾಧ್ಯಾಪಕರ ಸಹಾಯ ಪಡೆದು ಹಗಲು ರಾತ್ರಿ ಶ್ರಮವಹಿಸಿ ಓದಿ ಉತ್ತಮ ಅಂಕ ಗಳಿಸಿರುವ ಮಾನ್ಯ ಮುಂದೆ ಸಿಎ ಆಗಬೇಕು ಎನ್ನುವ ಹಂಬಲವನ್ನು ಇಟ್ಟುಕೊಂಡಿದ್ದಾಳೆ. ಕಾಲೇಜಿನ ವಾಣಿಜ್ಯ ವಿಭಾಗದ ಪ್ರಥಮ ಸ್ಥಾನಿಯಾಗಿ ಉತ್ತಮ ಫಲಿತಾಂಶ ಪಡೆದಿರುವ ಮಾನ್ಯ ಎಸ್ ಪೂಜಾರಿ ಶ್ರಮಕ್ಕೆ ಶ್ರೀ ದುರ್ಗಾಪರಮೇಶ್ವರಿ ಟೆಂಪಲ್ ಮಂದಾರ್ತಿ. ಇಲ್ಲಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗ ಅಭಿನಂದನೆ ಸಲ್ಲಿಸಿದೆ.