Tuesday, March 17, 2026

spot_img

ದಾರಿ ತಪ್ಪಿದ ಬಾಲಕನನ್ನು 12 ಗಂಟೆಯಲ್ಲಿ ಪೋಷಕರಿಗೆ ಒಪ್ಪಿಸಿದ ಗಂಗೊಳ್ಳಿ ಪೊಲೀಸ್‌ ಠಾಣಾಧಿಕಾರಿ ಪವನ್‌ ನಾಯ್ಕ್‌ ..

ಉಡುಪಿ : ಕಡುಬಡತನದಲ್ಲಿ ಬೆಳೆದ, ಸುಮಾರು 15 ವರ್ಷದ ಬುದ್ಧಿಮಾಂದ್ಯ ಬಾಲಕನೊಬ್ಬ ದಾವಣಗೆರೆ ನಗರದಿಂದ ಮನೆ ಬಿಟ್ಟು ಉಡುಪಿ ಜಿಲ್ಲೆಗೆ ಬಂದ ಬಾಲಕನನ್ನು ರಕ್ಷಿಸಿದ ಗಂಗೊಳ್ಳಿ ಪೊಲೀಸ್‌ ಠಾಣಾಧಿಕಾರಿ ಪವನ್‌ ನಾಯ್ಕ್‌ ಅವರು ತಂಡದ ನೆರವಿನೊಂದಿದೆ ಊರು ಹುಡುಕಿ ಮರಳಿ ಕಳುಹಿಸಿದ ಘಟನೆ ನಡೆದಿದೆ.

 ತಂದೆಯನ್ನು ಬಾಲ್ಯದಲ್ಲೇ ಕಳೆದುಕೊಂಡಿದ್ದ ಈ ಬಾಲಕ, 7ನೇ ತರಗತಿ ವರೆಗೆ ಓದಿ ನಂತರ ಊರು ಅಲೆದಾಡುತ್ತಾ ಜೀವನ ಸಾಗಿಸುತ್ತಿದ್ದನು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಶಂಕರ್ ಅಲಿಯಾಸ್ ಪ್ರಸಾದ್ ಎಂಬ ಬಾಲಕ ನಾಡ ಗ್ರಾಮದ ಬಳಿ ರಾತ್ರಿ ವೇಳೆಯಲ್ಲಿ ಅಲೆದಾಡುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಪೊಲೀಸ್‌ ಠಾಣಾಧಿಕಾರಿ ಪವನ್‌ ನಾಯ್ಕ್‌ ಮತ್ತು ಸಿಬ್ಬಂದಿಗಳು ಬಾಲಕನನ್ನು ಗಂಗೊಳ್ಳಿ ಪೊಲೀಸ್ ಠಾಣೆಗೆ ಕರೆತಂದು ಆರೈಕೆ ಮಾಡಿದ್ದಾರೆ. ನಂತರ ಒಂದು ದಿನಕ್ಕೆ ನಮ್ಮ ಭೂಮಿ ಸಂಸ್ಥೆಯಲ್ಲಿ ವಾಸ್ತವ್ಯ ಒದಗಿಸಿ, ಮರುದಿನ ಮಕ್ಕಳ ಕಲ್ಯಾಣ ಸಮಿತಿಯವರ ಮುಂದಿಟ್ಟರು. ಬಳಿಕ ಬಾಲಕನನ್ನು ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ.

ಬಾಲಕನ ವಿಳಾಸ ಪತ್ತೆ ಮಾಡಲು ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್ ತಂಡ ಸಾಕಷ್ಟು ಶ್ರಮವಹಿಸಿದ್ದು, ಆತ ದಾವಣಗೆರೆ ಮೂಲದವನು ಎಂಬ ಮಾಹಿತಿ ಆಧರಿಸಿ ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದರು. ಗಾಂಧಿನಗರ ಪೊಲೀಸ್ ಠಾಣೆಯ ಸಿಬ್ಬಂದಿ ರಮೇಶ್ ನಾಯ್ಕ್ ಅವರ ಸಹಕಾರದೊಂದಿಗೆ ವಾಟ್ಸಪ್ ಮೂಲಕ ಬಾಲಕನ ಭಾವಚಿತ್ರ ಹಂಚಿ ಪರಿಶೀಲನೆ ನಡೆಸಿದ ಪರಿಣಾಮ, ಬಾಲಕನ ನಿಜವಾದ ವಿಳಾಸ ಪತ್ತೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಠಾಣೆಯ ರಾಘವೇಂದ್ರ ಪಿ., ಶಾಂತರಾಮ್ ಶೆಟ್ಟಿ, ಚಂದ್ರ ಹಾಗೂ ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಮತ್ತು ನಾಗರಾಜ್ ಅವರ ಸತತ ಪರಿಶ್ರಮದಿಂದ ಬಾಲಕನನ್ನು ಶೀಘ್ರ ಪತ್ತೆ ಹಚ್ಚಿದ್ದಾರೆ. ಸದ್ಯ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಬಾಲಕನನ್ನು ಮರಳಿ ದಾವಣಗೆರೆಗೆ ತಲುಪಿಸಿ, ಪೋಷಕರ ವಶಕ್ಕೆ ಒಪ್ಪಿಸಲಾಯಿತು. ಪೊಲೀಸರ ತ್ವರಿತ ಕ್ರಮದಿಂದ ಕೇವಲ 12 ಗಂಟೆಗಳೊಳಗೆ ದಾರಿ ತಪ್ಪಿದ ಬಾಲಕನನ್ನು ಪೋಷಕರ ಮಡಿಲಿಗೆ ತಲುಪಿಸಲಾಗಿದ್ದು, ಅವರ ಕರ್ತವ್ಯನಿಷ್ಠೆ ಹಾಗೂ ಮಾನವೀಯತೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles