ಉಡುಪಿ : ಬಾರ್ಕೂರು ಸಮೀಪದ ಹನೆಹಳ್ಳಿ ಗ್ರಾಮದ ಕೂರಾಡಿ ಸಂಕಮ್ಮ ತಾಯಿ ರೆಸಾರ್ಟ್‌ನಲ್ಲಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲೆಸಿದ್ದ ವಿದೇಶಿಗರನ್ನು ಕೆಲಸಕ್ಕೆ ಬಳಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಾರ್ಕೂರು ಸರ್ಕಾರಿ ಆಸ್ಪತ್ರೆಗೆ ವಿದೇಶಿ ಮಹಿಳೆಯೊಬ್ಬರು ಗರ್ಭಿಣಿ ಚಿಕಿತ್ಸೆಗೆ ಬಂದ ವೇಳೆ, ಯಾವುದೇ ದಾಖಲಾತಿ ಇಲ್ಲದಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಆರು ಮಂದಿ ವಿದೇಶಿಗರು ಹಾಗೂ ಮೂವರು ಸಣ್ಣ ಮಕ್ಕಳು ರೆಸಾರ್ಟ್‌ನಲ್ಲಿ ಅಕ್ರಮವಾಗಿ ವಾಸಿಸುತ್ತಿರುವುದು ಪತ್ತೆಯಾಗಿದೆ. ಪತ್ತೆಯಾದವರ ಬಳಿ ಪಾಸ್‌ಪೋರ್ಟ್, ವೀಸಾ, ಗುರುತಿನ ಚೀಟಿ ಸೇರಿದಂತೆ ಯಾವುದೇ ಮಾನ್ಯ ದಾಖಲೆಗಳು ಲಭ್ಯವಿರಲಿಲ್ಲ. ಅವರು ಯಾವ ದೇಶದ ಪ್ರಜೆಗಳು ಎಂಬುದೂ ಸ್ಪಷ್ಟವಾಗಿಲ್ಲ.

ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಇಮಿಗ್ರೇಶನ್ ಮತ್ತು ಫಾರಿನರ್ಸ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.



