ಉಡುಪಿ : ಉಡುಪಿ ಜಿಲ್ಲೆಯಲ್ಲಿ ಶೇಕಡಾ 85 ರಷ್ಟು ದಲಿತರು ಇನ್ನೂ ಭೂರಹಿತ ಕೂಲಿ ಕಾರ್ಮಿಕರಾಗಿದ್ದಾರೆ. ಸರ್ಕಾರದ ಅನೇಕ ಯೋಜನೆಗಳು ಅಸ್ತಿತ್ವದಲ್ಲಿದ್ದರೂ, ದಲಿತರಿಗೆ ಭೂಮಿ ಮತ್ತು ವಸತಿ ಹಕ್ಕುಗಳು ತಲುಪಿಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಸಮಿತಿಯು ವ್ಯವಸ್ಥಿತ ಹೋರಾಟವನ್ನು ಆರಂಭಿಸಿದ್ದು, ಜಿಲ್ಲೆಯ ಪ್ರತಿ ಗ್ರಾಮದ ವ್ಯಾಪ್ತಿಯಲ್ಲಿ ಲಭ್ಯ ಸರಕಾರಿ ಜಮೀನಿನಲ್ಲಿ ಶೇ.50 ರಷ್ಟನ್ನು ದಲಿತರಿಗೆ ಕಡ್ಡಾಯವಾಗಿ ಮೀಸಲಿಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಮಾಡಲಾಗಿದೆ ಎಂದು ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಸಂಜೀವ ಬಳ್ಕೂರು ಹೇಳಿದರು.

ಅವರು ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ಜರುಗಿದ ದಲಿತ ಹಕ್ಕುಗಳ ಸಮಿತಿ, ಉಡುಪಿ ಜಿಲ್ಲಾ ಘಟಕದ ಪ್ರಥಮ ಜಿಲ್ಲಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರಾಜಣ್ಣ ಮಾತನಾಡಿ, ಸಮಾಜದ ಬೌದ್ಧಿಕ ವಿನ್ಯಾಸವೇ ದಲಿತರನ್ನು ಶೋಷಣೆಗೀಡು ಮಾಡಿದೆ. ಗೌರವ, ಜಮೀನು, ಶಿಕ್ಷಣ ಎಲ್ಲದರ ಮೇಲೂ ದಲಿತರಿಗೆ ನಿರ್ಭಂಧ ಹೇರುವ ಕೆಲಸ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದು ದೇಶದ ಶೇ.50 ಆಸ್ತಿ ಕೇವಲ ಶೇ. 1 ಜನರ ಕೈಯ್ಯಲ್ಲಿದೆ. ಈ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯನ್ನು ತೊಡೆದುಹಾಕುವಲ್ಲಿ ದಲಿತ ಹಕ್ಕುಗಳ ಸಮಿತಿಯು ರಾಜಿ ರಹಿತ ಹೋರಾಟ ನಡೆಸಲಿದೆ ಎಂದರು.

ಉದ್ಘ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಕಟ್ಟಡ ಹಾಗೂ ಇತರ ನಿರ್ಮಣ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಸಿ.ಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಹೆಚ್. ಹರಸಿಂಹ, ಕಟ್ಟಡ ಕಾರ್ಮಿಕ ಸಂಘ, ಬೈಂದೂರು ತಾಲೂಕು ಅಧ್ಯಕ್ಷರಾದ ರಾಜೀವ ಪಡುಕೋಣೆ ಉಪಸ್ಥಿತರಿದ್ದರು.

ದಲಿತ ಹಕ್ಕುಗಳ ಸಮಿತಿ, ಮೂಡಬೆಳ್ಳೆ ಘಟಕದ ಶ್ರೀರಾಮ ದಿವಾಣ ಮೂಡಬೆಳ್ಳೆ ಇವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಹ ಸಂಚಾಲಕಿಯಾದ ನಾಗರತ್ನಾ ಆರ್. ನಾಡಾ ಕಾರ್ಯಕ್ರಮ ನಿರೂಪಿಸಿದರು.
