ಅಬ್ಬರದ ಟೀಸರ್ ಗಳ ಮೂಲಕ ಚಿತ್ರ ರಸಿಕರ ಜೊತೆ ಯಕ್ಷ ರಸಿಕರ ಗಮನ ಸೆಳೆದಿರುವ ” ವೀರ ಚಂದ್ರಹಾಸ” ಚಿತ್ರ ಇನ್ನೇನು ಕೆಲವೇ ತಿಂಗಳುಗಳಲ್ಲಿ ತೆರೆಯ ಮೇಲೆ ಬರಲಿದೆ. ಖ್ಯಾತ ಸಂಗೀತ ನಿರ್ದೇಶಕ ಕೆಜಿಎಫ್, ಮಲಯಾಳಂ ನ ಮಾರ್ಕೊ ಚಿತ್ರದಂತಹ ಅದ್ಭುತ ಚಿತ್ರಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರು ನೇತೃತ್ವದಲ್ಲಿ ವೀರ ಚಂದ್ರಹಾಸ ಚಿತ್ರ ತೆರೆಯ ಮೇಲೆ ಬರಲಿದೆ.

ಮೊತ್ತ ಮೊದಲ ಬಾರಿಗೆ ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಸಿನಿಮಾ ಮೂಲಕ ತೆರೆಯ ಮೇಲೆ ತರುವ ಪ್ರಯತ್ನ ಇದಾಗಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಎನ್ನುವಂತೆ ಸಂಪೂರ್ಣ ಯಕ್ಷಗಾನವನ್ನೇ ಸಿನಿಮಾವಾಗಿ ತೆರೆಯ ಮೇಲೆ ತರುತ್ತಿರುವುದು ಇದೆ ಮೊದಲ ಬಾರಿಗೆ ಎನ್ನಬಹುದು. ಯಕ್ಷಗಾನ ಲೋಕದಲ್ಲಿ ಚಂದ್ರಹಾಸ ಕಥೆ ಬಹಳಷ್ಟು ಪ್ರಾಮುಖ್ಯತೆಯ ಜೊತೆಗೆ ಜನರ ಮನಸ್ಸನ್ನ ಸೆಳೆದಿರುವ ಒಂದು ಅಪೂರ್ವ ಕಥಾಹಂದರ. ತೆಂಕು ಮತ್ತು ಬಡಗುತಿಟ್ಟು ಮೇಳಗಳು ಅತಿ ಹೆಚ್ಚಾಗಿ ಚಂದ್ರಹಾಸ ಯಕ್ಷಗಾನ ಪ್ರಸಂಗವನ್ನ ಹಲವು ದಶಕಗಳಿಂದ ಆಡಿ ತೋರಿಸುತ್ತಾ ಬಂದಿದ್ದಾರೆ. ಇಂದಿಗೂ ಕೂಡ ಈ ಕಥೆ ಹೊಸದು ಎನ್ನುವಷ್ಟು ಅದ್ಭುತವಾಗಿ ಇರುವ ಹಿನ್ನಲೆಯನ್ನ ಈ ಕಥೆಯನ್ನ ಸಂಪೂರ್ಣ ಸಿನಿಮಾದ ಮೂಲಕ ತೆರೆಯ ಮೇಲೆ ತರಬೇಕು ಎನ್ನುವ ಆಸೆ ರವಿ ಬಸ್ರೂರ್ ಅವರದ್ದು. ನಮ್ಮ ಕರಾವಳಿಯ ಗಂಡು ಕಲೆ ಸಿನಿಮಾ ಮೂಲಕ ಗಡಿ ದಾಟಿ ರಾಜ್ಯದ ಮೂಲೆ ಮೂಲೆಯೂ ಕೂಡ ಪಸರಿಸಬೇಕು ಮತ್ತು ಯಕ್ಷಗಾನ ಅನ್ನುವಂತದ್ದು ಈ ಸಿನಿಮಾ ಮೂಲಕ ಮತ್ತಷ್ಟು ಉತ್ತುಂಗಕ್ಕೆ ಏರಬೇಕು ಎನ್ನುವ ಮಹದಾಸೆ ನಿರ್ದೇಶಕ ರವಿ ಬಸ್ರೂರು ಅವರದ್ದು.

ಇತ್ತೀಚಿಗಷ್ಟೇ ಡಾ. ಶಿವರಾಜಕುಮಾರ್ ಅವರು ಯಕ್ಷಗಾನ ವೇಷದಲ್ಲಿ ಕಾಣಿಸಿಕೊಂಡಿದ್ದ ಟೀಸರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ವೀರ ಚಂದ್ರಹಾಸ ಮತ್ತೊಮ್ಮೆ ಸುದ್ದಿಯಾಗಿತ್ತು. ಸದ್ಯ ಚಿತ್ರದ ಚಿತ್ರೀಕರಣ ಬಹುತೇಕ ಮುಗಿಸಿರುವ ಚಿತ್ರತಂಡ ಡಬ್ಬಿಂಗ್ ಮತ್ತು ಪೋಸ್ಟ್ ಪ್ರೋಡಕ್ಷನ್ ಕಾರ್ಯದಲ್ಲಿ ನಿರತರವಾಗಿದೆ.

ಕರಾವಳಿಯ ಯಕ್ಷ ಕಲಾವಿದರನ್ನು ಸಿನಿಮಾ ಮೂಲಕ ಯಕ್ಷಗಾನ ವೇಷ ಭೂಷಣದಲ್ಲಿ ಮೊದಲ ಬಾರಿಗೆ ದೊಡ್ಡ ತೆರೆಯ ಮೇಲೆ ಈ ಚಿತ್ರದಲ್ಲಿ ನೋಡಬಹುದಾಗಿದೆ. ಚಿತ್ರದಲ್ಲಿ ಬಹುತೇಕ ಬಡಗು, ತೆಂಕು ಮತ್ತು ಬಡಾಬಡಗು ತಿಟ್ಟಿನ ಯಕ್ಷ ಸುಮಾರು 450 ಯಕ್ಷಗಾನ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರ. ಮುಖ್ಯವಾಗಿ ವೀರ ಚಂದ್ರಹಾಸ ಚಿತ್ರದಲ್ಲಿ ಶಿಥಿಲ್ ಶೆಟ್ಟಿ, ನಾಗಶ್ರೀ ಜಿಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ ಕಡಬಾಳ್, ರವೀಂದ್ರ ದೇವಾಡಿಗ, ನಾಗರಾಜ್ ಸರ್ವೆಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಕೋಡು, ಶ್ವೇತಾ ಅರೆಹೊಳೆ, ಪ್ರಜ್ವಲ್ ಕಿನ್ನಾಳ್ ಸೇರಿದಂತೆ ಪ್ರತಿಭಾವಂತ ತಾರಾಗಣವಿದೆ. ಚಿತ್ರಕ್ಕೆ ಟೀಮ್ ರವಿ ಬಸ್ರೂರ್ ತಂಡದ ಪರಿಶ್ರಮವಿದೆ.

ರವಿ ಬಸ್ರೂರ್ ಮೂವೀಸ್ ಸಹಯೋಗದಲ್ಲಿ ಓಂಕಾರ್ ಮೂವೀಸ್ ನಿರ್ಮಿಸಿರುವ ಈ ಚಿತ್ರವನ್ನು ಸಹ ನಿರ್ಮಾಪಕರಾದ ಗೀತಾ ರವಿ ಬಸ್ರೂರ್, ವಿಜಿ ಗ್ರೂಪ್‌ನ ದಿನಕರ್, ಅನುಪ್ ಗೌಡ ಮತ್ತು ಅನಿಲ್ ಯುಎಸ್‌ಎ ಅವರೊಂದಿಗೆ ಎನ್‌ಎಸ್ ರಾಜ್‌ಕುಮಾರ್ ನಿರ್ಮಾಪಕರಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರ ತೆರೆ ಮೇಲೆ ಬರಲಿದ್ದು, ಈ ಹೊಸ ಪ್ರಯತ್ನಕ್ಕೆ ಚಿತ್ರ ರಸಿಕರು ಹೇಗೆ ಪ್ರತಿಕ್ರಿಯೆಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.