ಉಡುಪಿ : ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿಯ ವತಿಯಿಂದ ಜಿಲ್ಲಾ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಜನವರಿ 12ರಂದು ತೆಂಗು ಅಭಿವೃದ್ಧಿ ಕುರಿತ ಬೃಹತ್ ಕಾರ್ಯಾಗಾರವನ್ನು ಆಯೋಜಿಸಲಾಗುವುದು ಎಂದು ಉಡುಪಿ–ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅವರು ಮಣಿಪಾಲದ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕಾರ್ಯಾಗಾರವನ್ನು ಕುಂದಾಪುರ ತಾಲೂಕಿನಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಎರಡು ದಿನಗಳೊಳಗೆ ಸ್ಥಳ ಗುರುತಿಸಿ ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ 16,252 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದೆ. ಕರಾವಳಿಯ ಜೇಡಿ–ಮರಳು ಮಿಶ್ರಿತ ಮಣ್ಣು ಹಾಗೂ ಹೆಚ್ಚುವರಿ ಮಳೆಯು ತೆಂಗು ಬೆಳೆಗೆ ಅನುಕೂಲಕರವಾಗಿದ್ದು, ರೈತರಿಗೆ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಾಗಾರದಲ್ಲಿ ದೇಶದ ವಿವಿಧ ಭಾಗಗಳಿಂದ ತೆಂಗಿನ ಉತ್ಪನ್ನಗಳ ಪ್ರದರ್ಶನ, ನೀರಾ, ಬೆಲ್ಲ, ಚಾಕಲೇಟ್ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳ ಸ್ಟಾಲ್‌ಗಳು, ಕೃಷಿ–ತೋಟಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ಜೊತೆಗೆ ರೋಬೋಟಿಕ್ ಹಾರ್ವೆಸ್ಟರ್, ಹೈಬ್ರಿಡ್ ಮತ್ತು ಗಿಡ್ಡ ತಳಿಗಳು, ರೋಗ–ರೂಜಿನ ನಿರ್ವಹಣೆ, ತೆಂಗು ವಿಮಾ ಯೋಜನೆ, ಪ್ರೋತ್ಸಾಹಧನ, ತೆಂಗಿನ ನಾರು–ಚಿಪ್ಪಿನ ಬಳಕೆ, ನೀರಾ ಘಟಕ ಸ್ಥಾಪನೆ ಮುಂತಾದ ವಿಷಯಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುವುದು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಆಧುನಿಕ ಬೇಸಾಯ ಪದ್ಧತಿ ಹಾಗೂ ಮೌಲ್ಯವರ್ಧನೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದರು. ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಉಪನಿರ್ದೇಶಕ ಚಂದ್ರಶೇಖರ್ ನಾಯಕ್, ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಉಡುಪ, ಕೃಷಿ ವಿಜ್ಞಾನ ಕೇಂದ್ರದ ಧನಂಜಯ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



