ಕುಂದಾಪುರ: ಸರ್ವೋದಯದ ಸತ್ಯಾಗ್ರಹ, ಸ್ವರಾಜ್ಯದ ಪರಿಕಲ್ಪನೆಯ ಭಾರತವನ್ನು ನಾವು ಕಟ್ಟಬೇಕು ಎಂದು ಗಾಂಧಿಯನ್ ಸೆಂಟರ್ ಫಾರ್ ಫಿಲೋಸಾಫಿಕಲ್ ಆರ್ಟ್ಸ್ ಮತ್ತು ಸೈನ್ಸ್, ಮಣಿಪಾಲ ಹೈಯರ್ ಎಜುಕೇಷನ್ , ಮಣಿಪಾಲ ಇದರ ಮುಖ್ಯಸ್ಥರಾದ ಪ್ರೊ.ವರದೇಶ್ ಹಿರೇಗಂಗೆ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ, ಮತ್ತು ಮಂಗಳೂರು ವಿಶ್ವವಿದ್ಯಾಲಯದ ರಾಜ್ಯ ಶಾಸ್ತ್ರ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ನಡೆದ ತೃತೀಯ ಸೆಮಿಸ್ಟರ್ ರಾಜ್ಯ ಶಾಸ್ತ್ರ ಪಠ್ಯಕ್ರಮದ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ರಾಜಕೀಯ ಚಿಂತನೆಗಳು ಮೂಲಭೂತ ಚಿಂತನೆಗಳಿಗೆ ಒಳಗಾಗಬೇಕು. ಅಂದಿನ ಚಿಂತನೆಗಳನ್ನು ಇಂದು ನೋಡಲು ಸಾಧ್ಯವಿಲ್ಲ. ಹಾಗೆಯೇ ಸರ್ವಧರ್ಮ ಸಮಭಾವ, ಸರ್ವೋದಯದ ಪರಿಕಲ್ಪನೆಯ ರಾಷ್ಟ್ರೀಯತೆ ರೂಪುಗೊಳ್ಳಬೇಕು. ಸರ್ವ ಸಮನ್ವಯತೆ ಇರಬೇಕು ಎಂದು ಹೇಳಿದರು.
ಪಠ್ಯಕ್ರಮದ ನೆಲೆಯಲ್ಲಿ ರಾಜಕೀಯ ಚಿಂತನೆಗಳಲ್ಲಿ ಆಯಾ ಕಾಲಘಟ್ಟದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ರಾಜಕೀಯ ಶಾಸ್ತ್ರ ಎನ್ನುವುದು ವಿಶಾಲ ವ್ಯಾಪ್ತಿಯ ಕ್ಷೇತ್ರ. ಜಗತ್ತಿನಾದ್ಯಂತ ಹರಡಿಕೊಂಡ ಪ್ರಾಚೀನ ಜ್ಞಾನ ಶಾಸ್ತ್ರ. ವಿಶ್ವದೆಲ್ಲೆಡೆ ಹಲವು ಮಜಲುಗಳನ್ನು ಕಾಯ್ದುಕೊಂಡಿದೆ. ಇದು ಹಲವು ಸಿದ್ಧಾಂತಗಳನ್ನು ಒಳಗೊಂಡಿದೆ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ರಾಜಕೀಯ ಚಿಂತನೆ ಮತ್ತು ಚಿಂತಕರ ವಿಚಾರಗಳನ್ನು ತಿಳಿಯುತ್ತೇವೆ. ಆದರೆ ಮಹಿಳಾ ರಾಜಕೀಯ ಚಿಂತನೆಗಳನ್ನು ಗುರುತಿಸಿದಂತೆ ಇಲ್ಲ. ಭಾರತದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರಂತಹ ರಾಜಕೀಯ ಚಿಂತಕರಿದ್ದಾರೆ. ಮಹಿಳಾ ಚಿಂತನೆ ರಾಜ್ಯಶಾಸ್ತ್ರದಲ್ಲಿ ಪ್ರಮುಖ ಪಾತ್ರ ಪಡೆಯಬೇಕೆಂದು ಅವರು ಹೇಳಿದರು.

ಗಾಂಧೀಜಿ, ನೆಹರು, ಅಂಬೇಡ್ಕರ್ ಮೌಲಾನಾ ಅಬ್ದುಲ್ ಕಲಾಂ ಅಜಾದ್, ಕಮಲಾದೇವಿ ಚಟ್ಟೋಪಾಧ್ಯಾಯ ಇವರ ರಾಜಕೀಯ ಚಿಂತನೆಗಳನ್ನು ಗುರುತಿಸಬೇಕೆಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕರಾದ ಪ್ರೊ.ಸತ್ಯನಾರಾಯಣ, ಮಂಗಳೂರು ವಿಶ್ವವಿದ್ಯಾಲಯ ರಾಜ್ಯ ಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಐವಿನ್ ಫ್ರಾನ್ಸಿಸ್ ಲೋಬೋ, ಕಾರ್ಕಳದ ಎಸ್.ವಿ.ಟಿ.ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಗೀತಾ ಜಿ ಉಪಸ್ಥಿತರಿದ್ದರು .
ಮಂಗಳೂರು ವಿಶ್ವವಿದ್ಯಾಲಯ ರಾಜ್ಯ ಶಾಸ್ತ್ರ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಡಾಗಣೇಶ್ ಶೆಟ್ಟಿ ವಂದಿಸಿದರು. ಭಂಡಾರ್ಕಾರ್ಸ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹರ್ಷಿತಾ ಸ್ವಾಗತಿಸಿದರು. ಉಪನ್ಯಾಸಕಿಯರಾದ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಕಾವ್ಯಶ್ರೀ ಪರಿಚಯಿಸಿದರು.