ಉಡುಪಿ: ಉಡುಪಿ ಜಿಲ್ಲಾ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಕೆ.ಎಂ.ಸಿ ಮಣಿಪಾಲ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಆಸ್ಪತ್ರೆಯ ಶೂಶ್ರಷಕ ಅಧಿಕಾರಿಗಳಿಗೆ ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿಗಳಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾರ್ಡಿಯಾಕ್ ಪಲ್ಮನರಿ ರಿಸಪಿಟೇಶನ್ (ಸಿ.ಪಿ.ಆರ್.) ತರಬೇತಿ ಕಾರ್ಯಗಾರವನ್ನು ತಾಯಿ ಮಕ್ಕಳ ಆಸ್ಪತ್ರೆ (ಎಂ.ಸಿ.ಹೆಚ್.) ಯಲ್ಲಿ ನಡೆಸಲಾಯಿತು.

ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸರ್ಜನ್ ಡಾ. ಹೆಚ್. ಅಶೋಕ್ ಸಿ.ಪಿ.ಆರ್. ಒಂದು ನಿರ್ಣಾಯಕ ಜೀವ ಉಳಿಸುವ ತಂತ್ರವಾಗಿದ್ದು ತುರ್ತು ಸಂದರ್ಭಗಳಲ್ಲಿ ಇದು ಅತ್ಯಗತ್ಯವಾಗಿದೆ. ಈ ಕಾರ್ಯಕ್ರಮದ ಉದ್ದೇಶವು ತುರ್ತು ಸಂದರ್ಭಗಳಲ್ಲಿ ಈ ಸಿ.ಪಿ.ಆರ್. ಪ್ರಯೋಗದ ಬಗ್ಗೆ ನಮ್ಮ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಅರಿವು ಇರಬೇಕು ಎಂಬುದರ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು ಮತ್ತು ಇದರಿಂದ ಬಹಳಷ್ಟು ಜನರ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು.

ಎಂ.ಸಿ.ಹೆಚ್. ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ರಾಜಗೋಪಾಲ್ ಭಂಡಾರಿ, ಮಕ್ಕಳ ವಿಭಾಗದ ಡಾ. ಸಂದೀಪ್, ಮಹಿಳಾ ವಿಭಾಗದ ಡಾ. ಕವಿತಾ, ಕೆ.ಎಂ.ಸಿ. ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ಡಾ. ರತ್ನಾ, ಡಾ. ಮೇರಿ, ಮಕ್ಕಳ ವಿಭಾಗದ ಡಾ. ಸಂದೀಪ್, ಮತ್ತು ತುರ್ತು ಚಿಕಿತ್ಸಾ ವಿಭಾಗದ ಡಾ. ನೀರಜಾ, ಡಾ. ಅಭಿಷೇಕ್ ಅವರು ಉಪಸ್ಥಿತರಿದ್ದರು.

ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕೆ.ಎಂ.ಸಿ. ಮಣಿಪಾಲದ ಮಕ್ಕಳ ವಿಭಾಗದ ಡಾ. ಸಂದೀಪ್ ಮತ್ತು ತುರ್ತು ಚಿಕಿತ್ಸಾ ವಿಭಾಗದ ಡಾ. ನೀರಜಾ ಅವರು ಸಿಬ್ಬಂದಿಗಳ ಸಹಕಾರದೊಂದಿಗೆ ತಾಯಿ ಮಕ್ಕಳ ಆಸ್ಪತ್ರೆ (ಎಂ.ಸಿ.ಹೆಚ್.) ಯ ಸುಮಾರು 100 ಜನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಹಂತಗಳಲ್ಲಿ ಸಿ.ಪಿ.ಆರ್. ಕುರಿತು ಮಾಹಿತಿ ನೀಡಿದರು. ಸಮುದಾಯ ವೈದ್ಯಕೀಯ ವಿಭಾಗದ ಡಾ. ರತ್ನಾ ಹಾಗೂ ಇನ್ನಿತರ ಸಿಬ್ಬಂದಿಗಳು ಸಿ.ಪಿ.ಆರ್. ಕುರಿತು ಪ್ರಾಯೋಗಿಕವಾಗಿ ಮಾಹಿತಿ ನೀಡಿದರು. ಸಮುದಾಯ ವೈದ್ಯಕೀಯ ವಿಭಾಗದ ಸಾಮಾಜಿಕ ಕಾರ್ಯಕರ್ತರಾದ ಮಹೇಶ್ ಹಾಗೂ ವಿದ್ಯಾ ಅವರು ಸಹಕರಿಸಿದರು.

ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ರಾಷ್ಟ್ರಾದ್ಯಂತ ನಡೆಯುತ್ತಿರುವ ಸಿ.ಪಿ.ಆರ್. ಮಾಹಿತಿ ವಾರದ ಅಂಗವಾಗಿ ಉಡುಪಿ ಜಿಲ್ಲಾಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ವಿವಿಧ ಹಂತದ ತರಬೇತಿಯಲ್ಲಿ ಸುಮಾರು 155 ಜನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು.