ಉಡುಪಿ: ತಲ್ಲೂರು ಮೂಲಕ ನೇರಳಕಟ್ಟೆ–ಆಜ್ರಿ–ಸಿದ್ದಾಪುರ ರಸ್ತೆಯ ಶೆಟ್ರಕಟ್ಟೆ ಬಳಿ ಸೋಮವಾರ ಸಂಭವಿಸಿದ ಟಿಪ್ಪರ್–ಕೆಎಸ್ಆರ್ಟಿಸಿ ಬಸ್ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಟಿಪ್ಪರ್ ಚಾಲಕ ರಾಘವೇಂದ್ರ ಹಾಗೂ ಮಾಲಕ ಶ್ರೀಧರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಪು ಮಣ್ಣು ತುಂಬಿದ ಜಾಗದ ಮಾಲಕ ಮಂಜುನಾಥ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಬಸ್ಸಿನಲ್ಲಿದ್ದ 39 ಪ್ರಯಾಣಿಕರ ಪೈಕಿ 18 ಮಂದಿ ಗಾಯಗೊಂಡಿದ್ದು, ಇವರಲ್ಲಿ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ಸೇರಿದಂತೆ ಮೂವರು ತೀವ್ರ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಗಾಯಾಳುಗಳಿಗೆ ಕುಂದಾಪುರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ.

ಕೆಎಸ್ಆರ್ಟಿಸಿ ಕುಂದಾಪುರ ಘಟಕದ ಮುಖ್ಯಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಠಾಣಾಧಿಕಾರಿ ನಾಸೀರ್ ಹುಸೇನ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಟಿಪ್ಪರ್ನಲ್ಲಿ ಮಿತಿ ಮೀರಿದ ಕೆಂಪು ಮಣ್ಣನ್ನು ಪರವಾನಿಗೆ ನಿಯಮ ಉಲ್ಲಂಘಿಸಿ ಸಾಗಿಸಲಾಗುತ್ತಿತ್ತು. ಇನ್ಸೂರೆನ್ಸ್ ಹಾಗೂ ಪರವಾನಿಗೆ ಇಲ್ಲದೇ, ಅತೀವೇಗದಲ್ಲಿ ಕಿರಿದಾದ ರಸ್ತೆಯಲ್ಲಿ ಟಿಪ್ಪರ್ ಚಲಾಯಿಸಿ ಬಸ್ಸಿಗೆ ಡಿಕ್ಕಿ ಹೊಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಂಭೀರ ಗಾಯಗೊಂಡ ಮೂವರ ಪೈಕಿ ಓರ್ವರ ಸ್ಥಿತಿ ಚೇತರಿಕೆಯಾಗುತ್ತಿದ್ದು, ಇಬ್ಬರು ವಿದ್ಯಾರ್ಥಿನಿಯರನ್ನು ಐಸಿಯುನಲ್ಲಿ 48 ಗಂಟೆಗಳ ಕಾಲ ತೀವ್ರ ನಿಗಾದಲ್ಲಿರಿಸಲಾಗಿದೆ ಎಂದು ಕೆಎಂಸಿ ವೈದ್ಯಕೀಯ ಮೂಲಗಳು ತಿಳಿಸಿವೆ.



