ಉಡುಪಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 27ರಂದು ನಡೆಯಲಿರುವ ಪರ್ಯಾಯ ಪುತ್ತಿಗೆ ಮಠದ ಸಮಾರೋಪ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಕೃಷ್ಣಮಠಕ್ಕೆ ಆಗಮಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಪರ್ಯಾಯ ಪುತ್ತಿಗೆ ಮಠದ ಸಮಾರೋಪ ಅಂಗವಾಗಿ ಶ್ರೀಕೃಷ್ಣದೇವರಿಗೆ ಸ್ವರ್ಣಮಯ ಪಾರ್ಥಸಾರಥಿ ರಥ ಸಮರ್ಪಣಾ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಮಹತ್ವದ ಧಾರ್ಮಿಕ ಕಾರ್ಯಕ್ರಮಕ್ಕೆ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಲಾಗಿದೆ. ಪುತ್ತಿಗೆ ಮಠದ ವತಿಯಿಂದ ಲಕ್ನೋದಲ್ಲಿರುವ ಯೋಗಿ ಆದಿತ್ಯನಾಥ್ ಅವರ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಆಮಂತ್ರಣ ನೀಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಯೋಗಿ ಆದಿತ್ಯನಾಥ್ ಸಂತಸ ವ್ಯಕ್ತಪಡಿಸಿದ್ದು, ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡುವ ಬಗ್ಗೆ ಸಕಾರಾತ್ಮಕ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಯೋಗಿ ಆದಿತ್ಯನಾಥ್ ಅವರ ಭೇಟಿ ನಿಶ್ಚಿತಗೊಂಡಲ್ಲಿ, ಪರ್ಯಾಯ ಪುತ್ತಿಗೆ ಮಠದ ಸಮಾರೋಪ ಕಾರ್ಯಕ್ರಮಕ್ಕೆ ರಾಷ್ಟ್ರಮಟ್ಟದ ಮಹತ್ವ ದೊರಕುವ ಸಾಧ್ಯತೆ ಇದೆ ಎಂದು ಧಾರ್ಮಿಕ ವಲಯದಲ್ಲಿ ನಿರೀಕ್ಷೆ ವ್ಯಕ್ತವಾಗಿದೆ.



