ಉಡುಪಿ: ಹಣ ಹೂಡಿಕೆ ಮಾಡುವಂತೆ ಬಲವಂತವಾಗಿ ಪ್ರೇರೇಪಿಸಿ ದುಬೈನಲ್ಲಿ ಉದ್ಯೋಗದಲ್ಲಿದ್ದ ಕಾರ್ಕಳ ಮೂಲದ ವ್ಯಕ್ತಿಯೊಬ್ಬರಿಗೆ 12 ಲಕ್ಷಕ್ಕೂ ಅಧಿಕ ಮೊತ್ತ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆರ್ಮುಂಡೆ ಬೀಜಪಾಡಿಯ ನಿವಾಸಿ ಲಿಯೋ ಜೆರೋಮ್ ಮೆಂಡೋನ್ಸಾ, ಕಳೆದ 15 ವರ್ಷಗಳಿಂದ ದುಬೈಯಲ್ಲಿ ಉದ್ಯೋಗದಲ್ಲಿದ್ದು, ಕಾರ್ಕಳ ಕಣಜಾರು ಹಾಗೂ ನಿಟ್ಟೆ ದೂಪದಕಟ್ಟೆಯ ಬ್ಯಾಂಕ್ಗಳಲ್ಲಿ ಖಾತೆ ಹೊಂದಿದ್ದಾರೆ. ನವೆಂಬರ್ 12ರಂದು, ದುಬೈಯಲ್ಲಿ ಇದ್ದ ಸಂದರ್ಭದಲ್ಲಿ ಲಿಯೋ ಅವರ ಟೆಲಿಗ್ರಾಂ ಖಾತೆಗೆ ಅಪರಿಚಿತ ವ್ಯಕ್ತಿಗಳಿಂದ ಸಂದೇಶಗಳು ಬಂದು, ಹಣ ಹೂಡಿಕೆ ಮಾಡುವಂತೆ ಪ್ರಲೋಭನ ಹುಟ್ಟಿಸಲಾಗಿದೆ. ಪ್ರಾರಂಭದಲ್ಲಿ ಅವರು ಹೂಡಿದ ಚಿಕ್ಕ ಮೊತ್ತಕ್ಕೆ ಲಾಭಾಂಶ ತೋರಿಸಿ ನಂಬಿಕೆ ಮೂಡಿಸಿದ ಆರೋಪ ವ್ಯಕ್ತವಾಗಿದೆ.

ನಂತರ ವಿವಿಧ ಟಾಸ್ಕ್ಗಳನ್ನು ನೀಡುವುದಾಗಿ ಹೇಳಿ, ಒಂದು ವೆಬ್ಸೈಟ್ ವಿಳಾಸ ನೀಡಿ, ಅದರಲ್ಲಿ ಯೂಸರ್ನೇಮ್ ಹಾಗೂ ಐಡಿ ರಚಿಸುವಂತೆ ಸೂಚಿಸಲಾಗಿದೆ. ನಂಬಿಕೆ ತಂದ ಲಿಯೋ, ನವೆಂಬರ್ 15ರಿಂದ 17ರವರೆಗೆ ಹಂತ ಹಂತವಾಗಿ ಒಟ್ಟು 12,25,000 ರೂಪಾಯಿ ಹೂಡಿಕೆ ಮಾಡಿದ್ದಾರೆ. ಆದರೆ ನಂತರ ಸೈಬರ್ ವಂಚಕರು ಲಿಯೋ ಅವರು ಹೂಡಿದ ಹಣವನ್ನಾಗಲೀ, ಅದರ ಲಾಭಾಂಶವನ್ನಾಗಲೀ ನೀಡದೆ ಜಾಲತಾಣವನ್ನು ಮುಚ್ಚಿ ವಂಚಿಸಿರುವುದು ತಿಳಿದು ಬಂದಿದೆ. ಈ ಬಗ್ಗೆ ಲಿಯೋ ಸಲ್ಲಿಸಿದ ದೂರು ಮೇರೆಗೆ ಉಡುಪಿ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.



