ಉಡುಪಿ: ಉಡುಪಿಯ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಐದು ದಿನಗಳ ಶೈಕ್ಷಣಿಕ ಸನಿವಾಸ ಶಿಬಿರ ಜೀವನ ವಿದ್ಯಾ ಸಮಾರೋಪ ಸಮಾರಂಭ ಶನಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರಿಕೃಷ್ಣ ಭಟ್, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಹೊಸಹೊಸ ಕೌಶಲಗಳನ್ನು ಕಲಿತು ಸದಾ ಜ್ಞಾನವರ್ಧನೆ ಮಾಡಿಕೊಂಡಿರಬೇಕು ಎಂದು ಸಲಹೆ ನೀಡಿದರು. ಅಂಬಲಪಾಡಿ ದೇವಳ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಉದ್ಯಮಿ ಶ್ರೀಕಾಂತ ಅರಿಮಣಿತ್ತಾಯರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಉದ್ಯೋಗಾವಕಾಶಗಳಿಗೆ ಪೂರಕವಾದ ಕೌಶಲಗಳನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಪ್ರೊ. ಸಖಾರಾಮ ಸೋಮಯಾಜಿ, ಬಿ. ನರಹರಿ, ಪಿ. ಸತೀಶ್ ರಾವ್, ಶ್ರೀಧರ ಶೇಟ್ ಹಾಗೂ ಮಾರಾಳಿ ಪ್ರತಾಪ ಹೆಗ್ಡೆ ಅಭ್ಯಾಗತರಾಗಿ ಭಾಗವಹಿಸಿದ್ದರು. ಶಿಬಿರದ ನಿರ್ದೇಶಕರಾದ ಮಂಗಳೂರಿನ ಪ್ರೊಟೊ ಅಪ್ ಸ್ಕಿಲ್ ಸಂಸ್ಥೆಯ ಗುರುದತ್ತ ಬಂಟ್ವಾಳಕರ್, ಸಹನಾ ಕಿಣಿ ಹಾಗೂ ಬಳಗದವರನ್ನು ಗೌರವಿಸಲಾಯಿತು.ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗಡೆ, ಡಾ. ಸುದರ್ಶನಮೂರ್ತಿ ದಂಪತಿಗಳು ಉಪಸ್ಥಿತರಿದ್ದರು. ಹತ್ತು ಮಂದಿ ವಿದ್ಯಾರ್ಥಿಗಳು ಶಿಬಿರದ ಅನುಭವ ಹಂಚಿಕೊಂಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಹಾಗೂ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಗುಂಪು ಛಾಯಾಚಿತ್ರ ವಿತರಿಸಲಾಯಿತು.

ಐದು ದಿನಗಳ ಶಿಬಿರದಲ್ಲಿ ನೇಮಿಚಂದ್ರ, ಪ್ರವೀಣ ವಿ. ಗುಡಿ, ಡಾ. ವಿರೂಪಾಕ್ಷ ದೇವರಮನೆ, ಡಾ. ಜೆ.ಎನ್. ಭಟ್, ಪಿ. ವಾಸುದೇವ ಐತಾಳ್, ಎಸ್. ವೆಂಕಟೇಶ್, ನಂದಾ ವೆಂಕಟೇಶ್, ಡಾ. ಶಾರದಾ ಎಂ., ಬಿ. ಭಾಸ್ಕರ ರಾವ್, ಸ್ವಸ್ತಿಕ್ ಕೆ.ಜೆ., ಡಾ. ಅಪರ್ಣಾ ಶಾನುಭಾಗ್, ಡಾ. ಗೀತಾ ಸಾಮಕ್, ಡಾ. ಪಿ. ಅನಂತಕೃಷ್ಣ ಭಟ್, ವಿಜಯಕುಮಾರ್ ಮುದ್ರಾಡಿ ಹಾಗೂ ಸಂಸ್ಕೃತಿ ಶೆಟ್ಟಿಗಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಿದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಪ್ರಸಾದ್ ಹಾಗೂ ಅಶೋಕ ಎಂ. ಸಹಕರಿಸಿದರು. ಶಿಬಿರದಲ್ಲಿ ಉಡುಪಿ ಜಿಲ್ಲೆಯ 244 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಾಲ್ಕನೇ ದಿನ ನಡೆದ ಕ್ಯಾಂಪ್ ಫೈರ್ ಕಾರ್ಯಕ್ರಮದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣ, ಆದ್ಯತಾ ಭಟ್ ಹಾಗೂ ಬಳಗದವರು ಯಕ್ಷಗಾನದ ತುಣುಕನ್ನು ಪ್ರಸ್ತುತಪಡಿಸಿ ವಿದ್ಯಾರ್ಥಿಗಳನ್ನು ರಂಜಿಸಿದರು. ಮರುದಿನ ನಡೆದ ಸ್ವಚ್ಛತಾ ಅಭಿಯಾನ ವಿದ್ಯಾರ್ಥಿಗಳಿಗೆ ವಿಶೇಷ ಸ್ಫೂರ್ತಿ ನೀಡಿತು.



