ಬ್ರಹ್ಮಾವರ: ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನ 21ನೇ ವಾರ್ಷಿಕೋತ್ಸವ ಕಾರ್ಯಕ್ರಮವು ನವೆಂಬರ್ 27 ಮತ್ತು 28 ರಂದು ಭವ್ಯವಾಗಿ ನೆರವೇರಿತು. ಎರಡು ದಿನಗಳಲ್ಲೂ ವಿದ್ಯಾರ್ಥಿಗಳ ಕಲಾ–ಸಾಂಸ್ಕೃತಿಕ ಪ್ರತಿಭೆ, ಸಾಧನೆ ಹಾಗೂ ಶಾಲೆಯ ಶಿಕ್ಷಣಮಟ್ಟ ಘನತೆಯಿಂದ ಪ್ರದರ್ಶನಗೊಂಡಿತು.

ಮೊದಲ ದಿನದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಉಡುಪಿ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್, ಶಾಲಾ ವಾರ್ಷಿಕೋತ್ಸವವು ಮಕ್ಕಳ ಬೆಳವಣಿಗೆ ಮತ್ತು ಪ್ರತಿಭೆಯನ್ನು ಆಚರಿಸುವ ವಿಶೇಷ ಕ್ಷಣ. ಜಿ ಎಮ್ ವಿದ್ಯಾರ್ಥಿಗಳ ಆತ್ಮವಿಶ್ವಾಸ ನೋಡಿದಾಗ ರಿಯಾಲಿಟಿ ಶೋ ವೀಕ್ಷಿಸುವ ಅನುಭವವಾಗುತ್ತದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ತಮ್ಮ ಗುರುಗಳು, ಪೋಷಕರು, ಶಿಕ್ಷಣದ ಮಠವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು.

ಅಪರಾಹ್ನದ ಅಧಿವೇಶನದಲ್ಲಿ ಉಡುಪಿ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕುಡ್ಲು ಮಾತನಾಡಿ, ಜಿ ಎಮ್ ಶಾಲೆಯನ್ನು ಶಿಸ್ತು, ಮೌಲ್ಯ ಮತ್ತು ಜ್ಞಾನಕ್ಕೆ ಆದ್ಯತೆ ನೀಡುವ ಶಿಕ್ಷಣ ಸಂಸ್ಥೆ ಎಂದು ಶ್ಲಾಘಿಸಿದರು. ಮಕ್ಕಳಿಗೆ ಕಠಿಣ ಪರಿಶ್ರಮ ಮತ್ತು ಬದ್ಧತೆ ಅಗತ್ಯ. ಭವಿಷ್ಯದಲ್ಲಿ ನಶೀಲ ಪದಾರ್ಥಗಳಿಂದ ದೂರವಿದ್ದು ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಕರೆ ನೀಡಿದರು.

ಎರಡನೇ ದಿನದ ಮುಖ್ಯ ಅತಿಥಿ ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ವಿದ್ಯಾರ್ಥಿಗಳ ಪ್ರದರ್ಶನದ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಜೀವನವೆಂದರೆ ಮೆದುಳಿನಿಂದ ಹೃದಯಕ್ಕೆ ಬರುವ ಒಳ್ಳೆಯ ತರಂಗ. ನಾಳೆಗಿಂತ ಇಂದೇ ಉತ್ತಮ ಎಂಬ ಮನೋಭಾವದಿಂದ ಗುರಿ ಸಾಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಜಿ ಎಮ್ ಯಶಸ್ಸಿಗೆ ಸಿಬ್ಬಂದಿ ವರ್ಗದ ಪರಿಶ್ರಮ ಮತ್ತು ಪೋಷಕರ ಬೆಂಬಲ ಕಾರಣ. ಶಾಲೆ ಪ್ರಾರಂಭದಿಂದಲೇ ರಾಷ್ಟ್ರೀಯ ಶಿಕ್ಷಣದ ಅಂಶಗಳನ್ನು ಅಳವಡಿಸಿಕೊಂಡಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಉತ್ತೇಜಿಸುವುದು ಅತ್ಯಂತ ಮುಖ್ಯ. ಸಂಸ್ಕಾರಗಳು ಹಾಳಾಗುತ್ತಿರುವ ಕಾಲದಲ್ಲಿ ಮೌಲ್ಯಗಳ ಬೋಧನೆ ಅಗತ್ಯ ಎಂದು ಹೇಳಿದರು.

ಪ್ರಾಂಶುಪಾಲ ಜಾರ್ಜ್ ಕುರಿಯನ್ ಶಾಲೆಯ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ನೀಡಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಹತ್ತನೇ ತರಗತಿಯ ಮೇರು ಸಾಧಕರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರತಿಭಾಶಾಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಶಾಲಾ ಮೇಧಾ ತಂಡವು ಈ ವರ್ಷ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡಿತು.ಎರಡು ದಿನಗಳ ಸಾಂಸ್ಕೃತಿಕ ಸಡಗರದಲ್ಲಿ ಸುಮಾರು 2,500 ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮಕ್ಕೆ ಪೋಷಕರು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.



