ಉಡುಪಿ : ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಗುರುತಿಸಲು ಕಟ್ಟುನಿಟ್ಟಿನ ಕ್ರಮವಹಿಸುವುದರೊಂದಿಗೆ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಯಾವುದೇ ತೊಂದರೆಯಾಗದAತೆ ನೋಡಿಕೊಳ್ಳಬೇಕು ಎಂದು ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರಾಜ್ಯದ ಆರ್ಥಿಕ ಸ್ಥಿತಿಯು ರಾಷ್ಟ್ರದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ಸಮೀಕ್ಷೆ ಅನ್ವಯ ಸುಮಾರು 7 ಲಕ್ಷಕ್ಕೂ ಅಧಿಕ ಅನರ್ಹ ಬಿ.ಪಿ.ಎಲ್ ಕಾರ್ಡ್ಗಳು ಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರವು ಇಂತಹ ಅನುಮಾಸ್ಪದ ಪಡಿತರ ಚೀಟಿಗಳನ್ನು ಪರಿಷ್ಕರಣಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಇಂತಹ ಪಡಿತರ ಚೀಟಿಗಳನ್ನು ಶೀಘ್ರದಲ್ಲಿ ಎ.ಪಿ.ಎಲ್ ಕಾರ್ಡ್ಗೆ ಪರಿವರ್ತಿಸುವಂತೆ ತಿಳಿಸಿದರು, ಒಂದು ವೇಳೆ ಅರ್ಹ ಬಿಪಿಎಲ್ ಕಾರ್ಡ್ಗಳು ಎ.ಪಿ.ಎಲ್ ಎಂದು ಪರಿವರ್ತನೆ ಹೊಂದಿದ್ದಲ್ಲಿ ಅಂಥವರು ಸಂಬಂಧಿಸಿದ ದಾಖಲೆಗಳನ್ನು ತಾಲೂಕಿನ ತಹಶೀಲ್ದಾರ್ಗಳಿಗೆ ಸಲ್ಲಿಸಿದ್ದಲ್ಲಿ ಅದನ್ನು ಶೀಘ್ರವೇ ಬಿಪಿಎಲ್ ಚೀಟಿಗೆ ಪರಿವರ್ತಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಅನರ್ಹ ಪಡಿತರ ಚೀಟಿದಾರರು ಪತ್ತೆಯಾದಲ್ಲಿ ಅಂತಹವರ ಪಡಿತರ ಚೀಟಿಗಳನ್ನು ಸರಕಾರದ ಮಾನದಂಡಗಳ ಅನ್ವಯ ಎ.ಪಿ.ಎಲ್ ಗೆ ಪರಿವರ್ತಿಸಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಪಡಿತರ ಚೀಟಿ ಅಕ್ಕಿಯನ್ನು ಅಕ್ರಮ ದಾಸ್ತಾನು ಅಥವಾ ಮಾರಾಟ ಮಾಡುತ್ತಿದ್ದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ರಶ್ಮಿ, ದ.ಕ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಕಾನೂನು ಮಾಪನ ಇಲಾಖೆಯ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಆಹಾರ ನಿರೀಕ್ಷಕರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು

ಜಿಲ್ಲೆಯಲ್ಲಿ ಒಟ್ಟು 295 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, 1,95,058 ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳಿದ್ದು, ಒಟ್ಟು 8,31,846 ಫಲಾನುಭವಿಗಳಿದ್ದಾರೆ. ಪಡಿತರ ವಿತರಣೆಯಲ್ಲಿ ರಾಜ್ಯದಲ್ಲಿಯೇ ಉಡುಪಿ ಜಿಲ್ಲೆಯು ಮೂರನೇ ಸ್ಥಾನದಲ್ಲಿದೆ. ಸೆಪ್ಟಂಬರ್ ಮಾಹೆಯಲ್ಲಿ 40375.45 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡುವುದರೊಂದಿಗೆ ಶೇ. 78.42 ಪ್ರಗತಿ ಸಾಧಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಆದ್ಯತಾ ಪಡಿತರ ಚೀಟಿಗೆ 13,947 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 13,412 ಅರ್ಜಿಗಳನ್ನು ವಿಲೇವಾರಿ ಮಾಡಿ, 535 ಅರ್ಜಿಗಳು ಬಾಕಿ ಇವೆ. ಆದ್ಯತೇತರ ಪಡಿತರ ಚೀಟಿಗೆ 12,332 ಅರ್ಜಿಗಳು ಸಲ್ಲಿಕೆಯಾಗಿ 10,294 ಅರ್ಜಿಗಳನ್ನು ವಿಲೇವಾರಿ ಮಾಡಿ, 2038 ಅರ್ಜಿಗಳ ವಿಲೇವಾರಿಗೆ ಬಾಕಿ ಇವೆ. ಇವುಗಳ ವಿಲೇವಾರಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು
ಕೆ.ಹೆಚ್ ಮುನಿಯಪ್ಪ (ಸಚಿವರು)


