ಉಡುಪಿ: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಒಟ್ಟು 29 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಕಟ್ಟುನಿಟ್ಟಿನ ನಿಗಾವಹಿಸಿದೆ. ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆಯಲ್ಲಿರುವ ಈ ಚೆಕ್‌ಪೋಸ್ಟ್‌ಗಳಲ್ಲಿ ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮರಳು, ಕೆಂಪು ಕಲ್ಲು, ಶಿಲೆಕಲ್ಲು ಹಾಗೂ ಎಂ-ಸ್ಯಾಂಡ್ ಸಾಗಾಟ ಮಾಡುವ ಎಲ್ಲಾ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ.

ಡಿ.06ರಿಂದ ಇದುವರೆಗೆ ಒಟ್ಟು 3,966 ವಾಹನಗಳನ್ನು ತಪಾಸಣೆ ನಡೆಸಲಾಗಿದ್ದು, ಅವುಗಳಲ್ಲಿ 11 ವಾಹನಗಳು ಸರಕಾರಕ್ಕೆ ಅಗತ್ಯ ರಾಯಧನ ಪಾವತಿಸದೇ ಹಾಗೂ ಯಾವುದೇ ಪರವಾನಿಗೆ ಇಲ್ಲದೇ ಖನಿಜ ಸಾಗಾಟ ನಡೆಸುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ವಾಹನವನ್ನು ಜಪ್ತಿ ಮಾಡಲಾಗಿದ್ದು, ವಾಹನದ ಚಾಲಕ ಮತ್ತು ಮಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉಳಿದ 10 ವಾಹನಗಳನ್ನು ಮಹಜರ್ ಮೂಲಕ ಸ್ವಾಧೀನಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಉಡುಪಿ ಗಣಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ.

ಈ ಪ್ರಕರಣಗಳಲ್ಲಿ ಗಣಿ ಇಲಾಖೆ ಸಂಬಂಧಿಸಿದ ವಾಹನಗಳ ಆರ್‌ಸಿ ಮಾಲಕರಿಗೆ ಒಟ್ಟು 3,08,710 ರೂಪಾಯಿ ದಂಡ ವಿಧಿಸಿರುವುದಾಗಿ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿಯೂ ಸರಕಾರಕ್ಕೆ ರಾಯಧನ ಪಾವತಿಸದೇ ಹಾಗೂ ಪರವಾನಿಗೆ ಇಲ್ಲದೇ ಖನಿಜ ಸಾಗಾಟ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.



