ಉಡುಪಿ : ಜಿಲ್ಲೆಯಲ್ಲಿ ಸಂಭವನೀಯ ಪ್ರಕೃತಿ ವಿಕೋಪದ ಬಗ್ಗೆ ಹವಾಮಾನ ಇಲಾಖೆಯಿಂದ ನೀಡುವ ಮಾಹಿತಿಗಳನ್ನು ಸಾರ್ವಜನಿಕರಿಗೆ ತಲುಪಿಸಿ, ಅವುಗಳಿಂದ ರಕ್ಷಣೆ ಪಡೆಯುವ ಹಾಗೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಜಿಲ್ಲೆಯಲ್ಲಿ ಬಿಸಿ ಶಾಖದ ಮಾರುತಗಳು ಬೀಸುತ್ತವೆ ಎಂಬ ಬಗ್ಗೆ ಹವಾಮಾನ ಇಲಾಖೆ ವರದಿ ನೀಡಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ನೀಡಬೇಕು. ಅದರಿಂದ ರಕ್ಷಣೆ ಪಡೆಯಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಸಹ ತಿಳಿಸಿ, ಅವುಗಳಿಂದ ಯಾರೊಬ್ಬರಿಗೂ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಇವುಗಳನ್ನು ಆದ್ಯತೆಯ ಮೇಲೆ ಮಾಡಬೇಕು ಎಂದು ಸೂಚನೆ ನೀಡಿದರು.

ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವ ಸಾಧ್ಯತೆಗಳು ಇವೆ. ಈ ದಿನಗಳಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅವಶ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದ ಅವರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆಯೂ ಸಹ ಕ್ರಮ ವಹಿಸಬೇಕು ಎಂದರು. ಕಳೆದ ಸಾಲಿನಲ್ಲಿ ಹೆಚ್ಚಿನ ಮಳೆಯಿಂದ ಹಾನಿಗೊಳಗಾದ ಶಾಲಾ ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ಥಿ ಕಾರ್ಯಗಳನ್ನು ಆದ್ಯತೆಯ ಮೇಲೆ ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಹಾಗೂ ಮಳೆಯಿಂದ ಹಾನಿಗೊಳಗಾದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಸೇರಿದಂತೆ ಹೊಸದಾಗಿ ಡಾಂಬರೀಕರಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ ವಿವಿಧ ಅನುದಾನಗಳ ಅಡಿಯಲ್ಲಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಮುಂಬರುವ ದಿನಗಳಲ್ಲಿ ಯಾವಾಗ ಬೇಕಾದರೂ ಹೆಚ್ಚಿನ ಮಳೆಯಾಗುವ ಸಂಭವವಿದ್ದು, ಮಳೆಯ ನೀರು ಸರಾಗವಾಗಿ ಚರಂಡಿಯಲ್ಲಿ ಹರಿದುಹೋಗಲು ಅನುಕೂಲವಾಗುವಂತೆ ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳು ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು. ಮಳೆ-ಗಾಳಿಯಿಂದ ಮೆಸ್ಕಾಂನ ವಿದ್ಯುತ್ ಕಂಬಗಳು, ಟ್ರಾನಸ್‌ಫಾರ್ಮ್ಗಳು ಹಾಗೂ ವಿದ್ಯುತ್ ತಂತಿಗಳ ಹಾನಿಉಂಟಾದಾಗ ಅವುಗಳನ್ನು
ಬದಲಾಯಿಸಲು ಅಗತ್ಯವಿರುವ ಕಂಬಗಳು, ಟ್ರಾನ್ಸ್ಫಾರ್ಮ್ಗಳು ಸೇರಿದಂತೆ ಮತ್ತಿತರ ಪರಿಕರಗಳನ್ನು ಸಾಕಷ್ಟು ದಾಸ್ತಾನು ಇಟ್ಟುಕೊಳ್ಳಬೇಕು. ಇವುಗಳ ಜೊತೆಗೆ ಹೆಚ್ಚಿನ ಸಿಬ್ಬಂದಿ ವರ್ಗಗಳನ್ನು ನಿಯೋಜಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದರು.
ಕಳೆದ ವರ್ಷ ಮುಂಜಾಗ್ರತೆ ವಹಿಸಿ, ಅಪಾಯಕಾರಿ ಮರಗಳನ್ನು ಗುರುತಿಸಿ, ತೆರವುಗೊಳಿಸಿದ ಹಿನ್ನೆಲೆ, ಮರಬಿದ್ದ ಅಪಘಾತಗಳು ಅಷ್ಟಾಗಿ ಕಂಡುಬರಲಿಲ್ಲ. ಈ ಬಾರಿಯೂ ಮುಂಚಿತವಾಗಿಯೇ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಅರಣ್ಯ ಇಲಾಖೆಯವರು ಇತರೆ ಇಲಾಖೆಯ ಸಮನ್ವಯದೊಂದಿಗೆ ಕೈಗೊಳ್ಳಬೇಕು ಎಂದರು. ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ವಿಪತ್ತು ನಿರ್ವಹಣೆಯ ಯೋಜನೆಯನ್ನು ತಯಾರಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ಕಡಲಕೊರೆತದ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ ಪ್ರಸ್ತಾವನೆಯನ್ನು 115 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಕಮೀಷನರ್ ಮಹೇಶ್ಚಂದ್ರ, ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕುಗಳ ತಹಶೀಲ್ದಾರ್‌ಗಳು, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.