ಉಡುಪಿ : ಜಾಗೃತ ಗ್ರಾಹಕರಿಂದಲೇ ಜಾಗೃತ ಹಾಗೂ ನ್ಯಾಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸುಮೀಲ ಟಿ. ಮಾಸರೆಡ್ಡಿ ಹೇಳಿದರು.

ನಗರದ ವಾದಿರಾಜ ರಸ್ತೆಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಆಹಾರ–ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಬಳಕೆದಾರರ ವೇದಿಕೆ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1986ರಲ್ಲಿ ಜಾರಿಗೆ ಬಂದ ಗ್ರಾಹಕ ಸಂರಕ್ಷಣಾ ಕಾಯ್ದೆ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಆನ್‌ಲೈನ್ ಯುಗದಲ್ಲಿ ವಿದ್ಯಾರ್ಥಿಗಳೂ ಗ್ರಾಹಕರಾಗಿರುವುದರಿಂದ, ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಅಗತ್ಯವಾಗಿದೆ. ದೋಷಪೂರಿತ ವಸ್ತುಗಳು, ಕೊರತೆಯ ಸೇವೆಗಳು ಹಾಗೂ ಆನ್‌ಲೈನ್ ವಂಚನೆಗಳ ವಿರುದ್ಧ ಗ್ರಾಹಕ ಆಯೋಗದಲ್ಲಿ ದೂರು ದಾಖಲಿಸಿ ನ್ಯಾಯ ಮತ್ತು ಪರಿಹಾರ ಪಡೆಯಬಹುದಾಗಿದೆ ಎಂದರು. ಗ್ರಾಹಕರನ್ನು ತಪ್ಪು ದಾರಿಗೆಳೆವ ಜಾಹೀರಾತುಗಳ ಬಗ್ಗೆ ಜಾಗೃತಿ ಇದ್ದರೆ ಅನ್ಯಾಯಯುತ ವ್ಯಾಪಾರ ಪದ್ಧತಿಗಳಿಗೆ ಕಡಿವಾಣ ಹಾಕಬಹುದು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ ಮಾತನಾಡಿ, ಡಿಜಿಟಲ್ ಯುಗದಲ್ಲಿ ಖರೀದಿ–ಮಾರಾಟ ಹೆಚ್ಚಾಗಿರುವುದರಿಂದ ಗ್ರಾಹಕರ ವೇದಿಕೆಗಳ ಪಾತ್ರ ಮಹತ್ವ ಪಡೆದುಕೊಂಡಿದೆ. ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಸೇವೆಗಳಲ್ಲಿ ಸಂಭವಿಸುವ ಅನ್ಯಾಯಗಳಿಗೂ ಗ್ರಾಹಕ ನ್ಯಾಯಾಲಯದಲ್ಲಿ ಪರಿಹಾರ ದೊರೆಯುತ್ತದೆ. ಡಿಜಿಟಲ್ ನ್ಯಾಯದಾನದಿಂದ ತ್ವರಿತ ನ್ಯಾಯ ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್, ಕಾನೂನು ಮಾಪನ ಇಲಾಖೆ ಸಹಾಯಕ ನಿಯಂತ್ರಕ ದೇವರಾಜ್ ಟಿ.ಎನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಬಳಕೆದಾರರ ವೇದಿಕೆ ಸಂಚಾಲಕ ಯುಜಿ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ರಶ್ಮಿ ಎಂ. ತೇಲಿ ಸ್ವಾಗತಿಸಿ, ಎಂ. ರಾಮ ಭಟ್ ನಿರೂಪಿಸಿದರು.



