Thursday, October 23, 2025

spot_img

ಜನಸಾಮಾನ್ಯರ ಆರೋಗ್ಯ ಕಾಪಾಡುತ್ತಿರುವ ಔಷಧ ತಜ್ಞರ ಸೇವೆ ಶ್ಲಾಘನೀಯ : ಪಿ.ವಿ ಭಂಡಾರಿ

ಉಡುಪಿ : ಜನಸಾಮಾನ್ಯರ ದೃಷ್ಟಿಯಲ್ಲಿ ವೈದ್ಯರಾಗಿ, ನಿರಂತರ ಸೇವೆ ಸಲ್ಲಿಸುತ್ತಾ ಜನರ ಅರೋಗ್ಯ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿರುವ ಔಷಧ ತಜ್ಞರ ಸೇವೆ ಶ್ಲಾಘನೀಯವಾದುದು ಎಂದು ಡಾ.ಎ.ವಿ ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ. ವಿ ಭಂಡಾರಿ ಹೇಳಿದರು. ಅವರು ನಗರದ ದೊಡ್ಡಣಗುಡ್ಡೆ ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗಾ ಸಭಾಂಗಣದಲ್ಲಿ, ಆಹಾರ ಸುರಕ್ಷತೆ  ಮತ್ತು ಔಷಧ ಆಡಳಿತ ಇಲಾಖೆ, ಸಹಾಯಕ ಔಷಧ ನಿಯಂತ್ರಕರ ಕಚೇರಿ, ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ (ರಿ) ಹಾಗೂ ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಔಷಧ ತಜ್ಞರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಔಷಧಿ ತಜ್ಞರಿಗೆ ತಾಳ್ಮೆ, ಸಹನೆ, ಮಾನವೀಯ ಗುಣ ಹಾಗೂ ಸಹಕಾರ ಭಾವನೆ ಇರಬೇಕು. ವೈದ್ಯರು ನೀಡಿದ ಔಷಧಿ ಚೀಟಿಗಳನ್ನು ಸರಿಯಾಗಿ ಗಮನಿಸಿದ ಬಳಿಕ ಔಷಧಿಗಳನ್ನು ನೀಡಿ ಅವುಗಳನ್ನು ಕ್ಲಪ್ತ ಸಮಯದಲ್ಲಿ ತೆಗೆದುಕೊಳ್ಳುವ ಕುರಿತು ರೋಗಿಗಳಿಗೆ ಮಾಹಿತಿಯನ್ನು ನೀಡಬೇಕು ಎಂದ ಅವರು, ರೋಗಿಗಳ ಆರೋಗ್ಯ ಕಾಪಾಡುವಲ್ಲಿ ಹಾಗೂ ಆರೋಗ್ಯಕರ ಸಮುದಾಯ ನಿರ್ಮಾಣ ಮಾಡುವಲ್ಲಿ ಔಷಧಿ ತಜ್ಞರು ಪ್ರಮುಖ ಪಾತ್ರ ವಹಿಸುತ್ತಾರೆ. ಇಂದಿನ ಆಧುನಿಕ ಜೀವನಶೈಲಿ ಹಾಗೂ ಆಹಾರ ಪದ್ಧತಿಗಳು ದೈನಂದಿನ ಚಟುವಟಿಕೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬೇಕು. ದಿನನಿತ್ಯ ವ್ಯಾಯಾಮ, ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಸೇರಿದಂತೆ ಮತ್ತಿತರ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು. ದೇಹ ಸ್ವಸ್ಥವಾಗಿದ್ದಾಗ ಮನಸ್ಸೂ ಸ್ವಸ್ಥವಾಗಿದ್ದು, ಇದರಿಂದ ರೋಗ-ರುಜಿನ ಮುಕ್ತರಾಗಿ ಆರೋಗ್ಯಕರ ಜೀವನ ನಡೆಸಬಹುದು ಎಂದರು.

ಇದೇ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಔಷಧ ತಜ್ಞರಾದ ಬಿ ಗಣಪತಿ ಕಾಮತ್, ಪಿ.ರಮೇಶ್ ನಾಯಕ್, ಭೋಜರಾಜ ಶೆಟ್ಟಿ, ಮೋಹನ್ ಆಚಾರ್ಯ, ದಯಾನಂದ ಪ್ರಭು, ಟಿ.ಪ್ರೇಮಚಂದ್ರ ಪೈ, ದಿನಕರ ಪ್ರಭು, ಜಯಪ್ರಕಾಶ್ ಶೆಟ್ಟಿ ಹಾಗೂ ತ್ರಿವಿಕ್ರಮ್ ಶೆಣೈ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಸಹಾಯಕ ಔಷಧಿ ನಿಯಂತ್ರಕ ಶಂಕರ್ ನಾಯ್ಕ್, ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಮೇಶ್ ನಾಯಕ್, ಸಾಯಿರಾಧ ಗ್ರೂಫ್ ಆಫ್ ಕರ್ನ್ಸ್ನ್ನ ಮನೋಹರ್ ಶೆಟ್ಟಿ, ಸಂಘದ

ಮಾಜಿ ಅಧ್ಯಕ್ಷ ವಿ.ಜಿ.ಶೆಟ್ಟಿ, ಔಷಧ ವ್ಯಾಪಾರಸ್ಥರು, ಬಾಳಿಗಾ ಆಸ್ಪತ್ರೆಯ ವೈದ್ಯಾಧಿಕಾರಿ, ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಶೆಟ್ಟಿ ಸ್ವಾಗತಿಸಿ, ಸತೀಶ್ ಚಂದ್ರ ನಾಯಕ್ ನಿರೂಪಿಸಿ, ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ರಾವ್ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles