Thursday, March 12, 2026

spot_img

ಚೊಂಬು ತಲೆಗೆ ಸಿಲುಕಿಕೊಂಡು ಪರದಾಡುತ್ತಿದ್ದ ಕೋತಿ ರಕ್ಷಣೆ..

ಉಡುಪಿ: ಕಳೆದ ಎರಡು–ಮೂರು ದಿನಗಳಿಂದ ತಲೆಗೆ ಚೊಂಬು ಸಿಲುಕಿಕೊಂಡು ಪರದಾಡುತ್ತಿದ್ದ ಕೋತಿಯೊಂದನ್ನು ಸ್ಥಳೀಯ ಯುವಕರು ರಕ್ಷಿಸಿದ ಘಟನೆ ಉಡುಪಿ ತಾಲೂಕಿನ ಪೆರ್ಣಂಕಿಲ ಗ್ರಾಮದ ಚಿತ್ರಬೈಲು ಎಂಬಲ್ಲಿ ಇಂದು ನಡೆದಿದೆ. ಪರಿಸರದಲ್ಲಿ ತಲೆಗೆ ಚೊಂಬು ಸಿಲುಕಿಕೊಂಡ ಸ್ಥಿತಿಯಲ್ಲಿ ಅಲೆದಾಡುತ್ತಾ ಒದ್ದಾಡುತ್ತಿದ್ದ ಕೋತಿಯನ್ನು ಸ್ಥಳೀಯ ಸಮಾಜಸೇವಕ ಹಾಗೂ ಪರಿಸರ ಪ್ರೇಮಿ ನವೀನ್ ಕುಮಾರ್ ಚಿತ್ರಬೈಲು ಮತ್ತು ಅವರ ಸ್ನೇಹಿತರು ಗಮನಿಸಿದ್ದಾರೆ. ಕೋತಿ ಆಹಾರ ಸೇವಿಸಲು ಹಾಗೂ ಸರಿಯಾಗಿ ಚಲಿಸಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ನವೀನ್ ಕುಮಾರ್ ಚಿತ್ರಬೈಲು, ಸುಕೇಶ್, ಹರೀಶ ರಾಮ ಮತ್ತು ವಿಶ್ವನಾಥ ಅವರುಗಳ ತಂಡ ಕೋತಿಯನ್ನು ಜಾಗರೂಕತೆಯಿಂದ ಹಿಡಿಯುವ ಕಾರ್ಯಕ್ಕೆ ಮುಂದಾಯಿತು. ಹಗ್ಗದ ಸಹಾಯದಿಂದ ಕೋತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಅವರು, ಬಳಿಕ ಚಿತ್ರಬೈಲು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪರಿಸರಕ್ಕೆ ಕರೆತಂದರು.

ಅಲ್ಲಿ ಕೋತಿಯ ತಲೆಗೆ ಸಿಲುಕಿಕೊಂಡಿದ್ದ ಚೊಂಬನ್ನು ತೆಗೆದುಹಾಕಲು ಮೊದಲು ನೀರನ್ನು ಸುರಿದು ತಲೆಯನ್ನು ಒದ್ದೆ ಮಾಡಲಾಯಿತು. ಬಳಿಕ ನಾಜೂಕಾಗಿ ಚೊಂಬನ್ನು ಬೇರ್ಪಡಿಸುವ ಪ್ರಯತ್ನ ನಡೆಸಿದರು. ಕೆಲ ಸಮಯದ ಪ್ರಯತ್ನದ ನಂತರ ಚೊಂಬನ್ನು ಸುರಕ್ಷಿತವಾಗಿ ಕೋತಿಯ ತಲೆಯಿಂದ ತೆಗೆದುಹಾಕಲು ಸಾಧ್ಯವಾಯಿತು.

ಚೊಂಬು ತೆಗೆದ ತಕ್ಷಣ, ಬದುಕು ಮರಳಿ ದೊರೆತಂತಾಗಿ ಕೋತಿ ಜಿಗಿದು ಓಡಿ ಸಮೀಪದ ಅರಣ್ಯ ಭಾಗಕ್ಕೆ ಮರೆಯಾಗಿತು. ಕಷ್ಟದಲ್ಲಿದ್ದ ಪ್ರಾಣಿಯನ್ನು ರಕ್ಷಿಸಿದ ಸ್ಥಳೀಯ ಯುವಕರ ಮಾನವೀಯ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪರಿಸರ ಹಾಗೂ ಪ್ರಾಣಿಗಳ ಬಗ್ಗೆ ಕಾಳಜಿ ತೋರಿದ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles