ಉಡುಪಿ : ಕಳೆದ 16 ವರ್ಷಗಳಿಂದ ಚೆಂಡೆವಾದಕರಾಗಿ ಸೇವೆ ಸಲ್ಲಿಸುತ್ತಿರುವ, ಪ್ರಸ್ತುತ ಮಂದಾರ್ತಿ ಮೇಳದ ಚೆಂಡೆವಾದಕರಾಗಿರುವ ಸುರೇಶ್ ಆಚಾರ್ಯ ಅವರ ಪೇತ್ರಿಯಲ್ಲಿರುವ, ಅತ್ಯಂತ ಜೀರ್ಣಾವಸ್ಥೆಯಲ್ಲಿರುವ ಮನೆಯ ಚಾವಣಿ ಇತ್ತೀಚೆಗೆ ಸುರಿದ ಗಾಳಿ ಮಳೆ ಸಿಲುಕಿ ಅಸ್ತವ್ಯಸ್ಥಗೊಂಡಿತ್ತು. ಯಾವುದೇ ಸಹಾಯ ಹಸ್ತದ ದಾರಿ ಕಾಣದೆ ಕಂಗಾಲಾಗಿ ಕುಳಿತಿದ್ದ ಚೆಂಡೆವಾದಕ ಸುರೇಶ್ ಆಚಾರ್ಯ ಅವರ ನೆರವಿಗೆ ಯಕ್ಷಗಾನ ಕಲಾರಂಗ ಧಾವಿಸಿದೆ. ಘಟನೆಯ ಬಳಿಕ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ನಾರಾಯಣ ಎಂ.ಹೆಗಡೆ ಭೇಟಿ ನೀಡಿ ದಾನಿಗಳ ನೆರವಿನಿಂದ ಈ ಮಳೆಗಾಲದ ಪೂರ್ವದಲ್ಲಿಯೇ ಮನೆಯನ್ನು ಕಟ್ಟಿಸಿ ಕೊಡುವ ಭರವಸೆಯನ್ನು ನೀಡಿದ್ದರು.

ಪೂರ್ಣ ಪ್ರಮಾಣದಲ್ಲಿ ಹೊಸ ಮನೆ ನಿರ್ಮಾಣ ಮಾಡುವ ಭರವಸೆ ನೀಡಿರುವ ಯಕ್ಷಗಾನ ಕಲಾರಂಗ ಸದ್ಯ ಆ ಕಾರ್ಯದಲ್ಲಿ ಮುಂದಿನ ಹೆಜ್ಜೆ ಇರಿಸಿದೆ. ಪೇತ್ರಿಯ ಆಚಾರ್ ಬೆಟ್ಟಿನಲ್ಲಿ ಮಂದಾರ್ತಿ ಮೇಳದ ಚೆಂಡೆವಾದಕರಾದ ಸುರೇಶ್ ಆಚಾರ್ಯ, ಕನ್ನಾರ್ ಇವರಿಗೆ, ಹೆಬ್ರಿಯ ಡಾ. ಭಾರ್ಗವಿ ಐತಾಳ್ ಇವರ ಪ್ರಾಯೋಜಕದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಮನೆಯ ಶಿಲಾನ್ಯಾಸವನ್ನು ಕೃಷಿತಜ್ಞರು, ಅರ್ಥಧಾರಿಯೂ ಆದ ಡಾ. ವೈಕುಂಠ ಹೇರ್ಳೆ ಅವರು ನೆರವೇರಿಸಿದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ರವರು ಮನೆ ನಿರ್ಮಿಸಲಿದ್ದು, ಇದೇ ಮೇ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ವೈದಿಕ ವಿದ್ವಾಂಸ ಹಾಗೂ ಸಂಸ್ಥೆಯ ಸದಸ್ಯರೂ ಆದ ಸೀತಾರಾಮ ಭಟ್, ಸಾಮಾಜಿಕ ಕಾರ್ಯಕರ್ತರಾದ ಕಮಲಾಕ್ಷ ಹೆಬ್ಬಾರ್, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಮತ್ತು ಸುರೇಶರ ಮಾತಾಪಿತರು ಉಪಸ್ಥಿತರಿದ್ದರು.