ಉಡುಪಿ: ಕುರ್ಕಾಲು ಗ್ರಾಮದ ಶಂಕರಪುರದಲ್ಲಿ ಫೆಬ್ರವರಿ 21ರಂದು ಬೆಳಗ್ಗೆ ನಡೆದ ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣವನ್ನು ಪೊಲೀಸರು ಅತ್ಯಂತ ಕ್ಷಿಪ್ರವಾಗಿ ಭೇದಿಸಿ, ಕೇವಲ ಮೂರು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಂಕರಪುರ ನಿವಾಸಿ ಹೆಲೆನ್ ಡಿಸೋಜ (69) ಅವರು ತಮ್ಮ ಮನೆಯ ಹಿಂಭಾಗದಲ್ಲಿ ಗೀತಾ ಅವರೊಂದಿಗೆ ಮಲ್ಲಿಗೆ ಕಟ್ಟುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಈ ಹಿಂದೆ ಬಾಡಿಗೆಗೆ ಇದ್ದ ಆನಂದ ಹಾಗೂ ಇನ್ನಿಬ್ಬರು ಯುವಕರು ಬಾಡಿಗೆ ರೂಮ್ ವಿಚಾರಿಸಲು ಬಂದಿದ್ದರು. ರೂಮ್ ಲಭ್ಯವಿಲ್ಲ ಎಂದು ತಿಳಿಸಿದ ಬಳಿಕ ಅವರು ಅಲ್ಲಿಂದ ತೆರಳಿದ್ದರು. ಸ್ವಲ್ಪ ಸಮಯದ ನಂತರ ಆರೋಪಿಗಳಲ್ಲಿ ಒಬ್ಬನು ಮರುಬಂದು ಮೊಬೈಲ್ ನಂಬರ್ ಕೇಳುವ ನೆಪದಲ್ಲಿ ಹೆಲೆನ್ ಡಿಸೋಜ ಅವರ ಕುತ್ತಿಗೆಯಲ್ಲಿದ್ದ ಸುಮಾರು 3.50 ಲಕ್ಷ ರೂ. ಮೌಲ್ಯದ, 28 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾನೆ. ಈ ವೇಳೆ ತಡೆಯಲು ಮುಂದಾದ ಹೆಲೆನ್ ಅವರ ಅಕ್ಕ ತೆರಜ ಅವರನ್ನು ದೂಡಿ ಹಾಕಿ ಮೂವರು ಆರೋಪಿಗಳು ಬೈಕ್‌ನಲ್ಲಿ ತಪ್ಪಿಸಿಕೊಂಡಿದ್ದಾರೆ.

ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪಲ್ಸರ್ ಬೈಕ್‌ನಲ್ಲಿ ಮೂವರು ಆರೋಪಿಗಳು ಕೃತ್ಯ ಎಸಗಿರುವುದು ದೃಢಪಟ್ಟಿತು. ಜಿಲ್ಲಾ ನಿಯಂತ್ರಣ ಕೊಠಡಿಯ ಮೂಲಕ ಎಲ್ಲಾ ಚೆಕ್‌ಪೋಸ್ಟ್‌ಗಳಿಗೆ ಮಾಹಿತಿ ರವಾನಿಸಲಾಗಿದ್ದು, ನಾಕಾಬಂದಿ ವೇಳೆ ಶಿರೂರ ಚೆಕ್ ಪೋಸ್ಟ್ ನಲ್ಲಿ ಬೈಂದೂರು ಪೊಲೀಸ್ ಠಾಣೆ ಪೊಲೀಸರು ಆರೋಪಿಗಳನ್ನು ತಡೆದು ಶಿರ್ವ ಪೊಲೀಸರ ವಶಕ್ಕೆ ಒಪ್ಪಿಸಿದರು. ಆರೋಪಿಗಳಿಂದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.



