Tuesday, February 17, 2026

spot_img

ಘನ ದ್ರವ ತ್ಯಾಜ್ಯ ಘಟಕಗಳಲ್ಲಿ ಸರಣಿ ಅಗ್ನಿ ಅವಘಡಗಳು: ಹಗರಣದ ವಾಸನೆ: ಸಮಗ್ರ ತನಿಖೆಗೆ ಒತ್ತಾಯ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಘನ ದ್ರವ ತ್ಯಾಜ್ಯ ನಿರ್ವಹಣೆಗೆ ನಿರ್ಮಿಸಲಾದ ಘಟಕಗಳಲ್ಲಿ ಸರಣಿ ಅಗ್ನಿ ಅವಘಡಗಳು ಸಂಭವಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಈ ಘಟನೆಗಳ ಹಿಂದೆ ಸಂಘಟಿತ ಹಗರಣವೊಂದು ಅಡಗಿರುವ ಸಾಧ್ಯತೆ ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಇತ್ತೀಚೆಗೆ ಹೆಬ್ರಿ ತಾಲೂಕಿನ ಎಂಆರ್‌ಎಫ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದಕ್ಕೂ ಮುನ್ನ ಬೆಳ್ವೆ ಭಾಗದಲ್ಲಿಯೂ ಇದೇ ರೀತಿಯ ಅಗ್ನಿ ಅವಘಡ ಸಂಭವಿಸಿತ್ತು. ಕಡಿಮೆ ಅವಧಿಯೊಳಗೆ ಒಂದರ ಹಿಂದೆ ಒಂದಾಗಿ ನಡೆಯುತ್ತಿರುವ ಈ ಬೆಂಕಿ ಘಟನೆಗಳು ಸಹಜವಲ್ಲವೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಘನ ದ್ರವ ತ್ಯಾಜ್ಯ ವಿಲೇವಾರಿ ಹಾಗೂ ಮರುಬಳಕೆಯ ಉದ್ದೇಶದಿಂದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಈ ಘಟಕಗಳನ್ನು ಸ್ಥಾಪಿಸಲಾಗಿತ್ತು. ಆದರೆ ದುಬಾರಿ ಯಂತ್ರೋಪಕರಣಗಳು, ತಾಂತ್ರಿಕ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳು ಮರುಮರು ಬೆಂಕಿಗೆ ಆಹುತಿಯಾಗುತ್ತಿರುವುದರಿಂದ ಸಾರ್ವಜನಿಕ ಹಣದ ದುರುಪಯೋಗವಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಸ್ಥಳೀಯ ನಿವಾಸಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಮಾತನಾಡಿ, ಬೆಂಕಿ ಅವಘಡಗಳ ನಿಖರ ಕಾರಣಗಳ ಕುರಿತು ಇದುವರೆಗೆ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟಕಗಳಲ್ಲಿ ಅಗತ್ಯ ಭದ್ರತಾ ಕ್ರಮಗಳು ಪಾಲಿಸಲಾಗಿದೆಯೇ, ನಿರ್ವಹಣೆಯಲ್ಲಿ ನಿರ್ಲಕ್ಷ್ಯವಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆಯೇ ಎಂಬ ಬಗ್ಗೆ ತನಿಖೆ ಅಗತ್ಯವಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಹೆಬ್ರಿ ಭಾಗದ ಹೋರಾಟಗಾರ ಶ್ರೀಕಾಂತ್ ಕುಚ್ಚೂರು ಮಾತನಾಡಿ, ಒಂದರ ಹಿಂದೆ ಒಂದಾಗಿ ನಡೆಯುತ್ತಿರುವ ಅಗ್ನಿ ಅವಘಡಗಳು ಸಹಜವಾಗಿರುವಂತೆ ಕಾಣುತ್ತಿಲ್ಲ. ಕೋಟ್ಯಾಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ಹಾನಿಯಾಗುತ್ತಿದೆ. ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು ಎಂದು ಹೇಳಿದ್ದಾರೆ. ಘನ ದ್ರವ ತ್ಯಾಜ್ಯ ನಿರ್ವಹಣೆಯಂತಹ ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳು ಹಗರಣಗಳಿಗೆ ಕಾರಣವಾಗಬಾರದು. ಜನರ ತೆರಿಗೆ ಹಣದಿಂದ ನಿರ್ಮಿತವಾಗಿರುವ ಈ ಘಟಕಗಳ ಸುರಕ್ಷತೆ, ನಿರ್ವಹಣೆ ಹಾಗೂ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಅಗತ್ಯವಿದೆ ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಸದ್ಯ ಈ ನಿಟ್ಟಿನಲ್ಲಿ ಶ್ರೀಕಾಂತ್‌ ಕುಚ್ಚೂರು, ಸಂಜೀವ ಶೆಟ್ಟಿ ಮತ್ತಿತರರು ಉಡುಪಿ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮತ್ತು ಲೋಕಾಯುಕ್ತ ಇಲಾಖೆ ದೂರು ಸಲ್ಲಿಸಿದ್ದು ತನಿಖೆಗೆ ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles