ಉಡುಪಿ: ಇಸ್ಕಾನ್ ಆಡಳಿತ ಸಮಿತಿ ಸದಸ್ಯ ಹಾಗೂ ಗೋವರ್ಧನ್ ಇಕೋ ವಿಲೇಜ್ ನಿರ್ದೇಶಕ ಗೌರಂಗದಾಸ್ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು.

ಮಠದ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ಮಾತಾಡುತ್ತಾ, ಗೀತೆ ಜ್ಞಾನದ ಭಂಡಾರ. ಬೇರೆ ವಿಷಯಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಕೋಟಿ ಗೀತಾ ಲೇಖನದಂತಹ ಮಹತ್ವದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಪೂಜೆ, ದರ್ಶನ, ಸೇವೆ ಮನಸ್ಸು ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಶಾಸ್ತ್ರಗಳ ಬಗ್ಗೆ ಅರಿವಿಲ್ಲದ ಧ್ರುವ ಭಗವಂತನ ಸ್ಪರ್ಶ ಮಾತ್ರದಿಂದಲೇ ಮಹಾನ್ ಜ್ಞಾನಿಯಾಗಿದ್ದ. ಹೀಗಾಗಿ ದೇವರ ಕೃಪಾ ದೃಷ್ಟಿಗೆ ಪಾತ್ರರಾಗುವುದು ಜೀವನದ ಗುರಿಯಾಗಬೇಕು ಎಂದರು.

ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಅವರನ್ನು ಪರ್ಯಾಯ ಪುತ್ತಿಗೆ ಮಠದಿಂದ ಸನ್ಮಾನಿಸಲಾಯಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಎನ್‌ಎಂಪಿಟಿ ಅಧ್ಯಕ್ಷ ಡಾ| ವೆಂಕಟರಮಣ ಅಕ್ಕರಾಜು ಭಾಗವಹಿಸಿದ್ದರು. ಗೌರಂಗದಾಸ್ ಅವರಿಗೆ ಪುತ್ತಿಗೆ ಸ್ವಾಮೀಜಿಯವರು ಮಧ್ವಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ನೀಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ವತಿಯಿಂದ ವಿದುಷಿ ಉಷಾ ಹೆಬ್ಟಾರ್ ನೇತೃತ್ವದಲ್ಲಿ ಕುಣಿತ ಭಜನೆ ಪ್ರಾತ್ಯಕ್ಷಿಕೆ ನಡೆಯಿತು.
