ಉಡುಪಿ : ಉಡುಪಿ ಜಿಲ್ಲೆಯಲ್ಲಿ ಗೋಕಳ್ಳತನ ಹಾಗೂ ಅಕ್ರಮ ಗೋಮಾಂಸ ಸಾಗಾಟಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿಯಲ್ಲಿರುವ ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ನ ಹಟ್ಟಿಯಲ್ಲಿರುವ 3 ದನಗಳನ್ನು ಯಾರೋ ವಾಹನದಲ್ಲಿ ಬಂದು ಕಳವು ಮಾಡಿ ವಾಹನದಲ್ಲಿ ತುಂಬಿಸಿಕೊಂಡು ಹೋಗಿದ್ದು ಕಳುವಾದ ದನಗಳ ಅಂದಾಜು ಮೌಲ್ಯ ರೂ 10000 ಎಂದು ದೂರು ನೀಡಲಾಗಿತ್ತು. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಯಾದ ಮೂಡುಬಿದರೆ ನಿವಾಸಿ ಸಲೀಂ(38) ಎಂಬತನನ್ನು ಬಂಧಿಸಲಾಗಿದೆ .ಹಾಗೂ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನು ಇಬ್ಬರು ಆರೋಪಿಗಳ ದಸ್ತಗಿರಿಗೆ ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸಾಡು ಗ್ರಾಮದ ಗುಹೇಶ್ವರ ದೇವಸ್ಥಾನಕ್ಕೆ ಹೋಗುವ ಕ್ರಾಸ್ ರಸ್ತೆಯಲ್ಲಿ ಮುಳ್ಳಿಕಟ್ಟೆಯಿಂದ ಗಂಗೊಳ್ಳಿ ಕಡೆಗೆ ತೆರಳುವ ರಸ್ತೆಯಲ್ಲಿ ಟಿವಿಎಸ್ ಜುಪೀಟರ್ ಸ್ಕೂಟರ್ ನಲ್ಲಿ ಆರೋಪಿ ಅಬ್ದುಲ್ ರಹೀಮ್(35) ಎಂಬಾತ 25 ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿದ್ದ. ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತೀರುವುದನ್ನು ಗಮನಿಸಿ ಮಾಂಸ ವಶಪಡಿಸಿಕೊಂಡು ಈ ಬಗ್ಗೆ ಗಂಗೋಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಅಬ್ದುಲ್ ರಹಿಂ(35) ಎಂಬಾತನನ್ನು ಬಂಧಿಸಿದ್ದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಗಂಗೊಳ್ಳಿಯಲ್ಲಿ ಬೆಳಗಿನ ಜಾವ 2 ಗಂಟೆಗೆ ಕೆ.ಇ.ಬಿ ಆಫೀಸ್ನ ಎದುರು ದನ ಕರುಗಳನ್ನು ಯಾರೋ ಕಳ್ಳರು ಕಾರಿಗೆ ತುಂಬಲು ಪ್ರಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿತ್ತು . ಆ ಪ್ರಕರಣದಲ್ಲೂ ಇದೇ ಆರೋಪಿಯು ಭಾಗಿಯಾಗಿರುವುದು ತಿಳಿದು ಬಂದಿದೆ.
